Wednesday, November 18, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೪ - ಮನೆಯ ದಾರಿ

ನಾವು ಆ ದಿನವೇ ಮನೆಗೆ ಹಿಂದ್ಹಿರುಗುತ್ತೇವೆ ಎಂದು ಅವರಿಗೆ ತಿಳಿಸಿದೆವು. ಅವರ ತೀರ ಒತ್ತಾಯದಿಂದ ಒಂದು ದಿನವಿಡೀ ಅಲ್ಲಿ ಇರಬೇಕಾಗಿ ಬಂತು. ಸಂಜೆ ತಾನು ತಿರುಗಾಡಲು ಕರೆದುಕೊಂಡು ಹೋಗುತ್ತೇನೆಂದು ಅವರು ತಿಳಿಸಿದರು. ಮಧ್ಯಾನ ಒಂದು ನಿದ್ದೆ ತೆಗೆದ ಮೇಲೆ ಅವರ ಜೊತೆ ನಾವು ಹೊರಟೆವು. ಅರುಣ ತನ್ನ ಕೈಯಲ್ಲಿ ನಡೆಯಲು ಆಗುವುದಿಲ್ಲ ಎಂದು ಮನೆಯಲ್ಲೇ ಉಳಿದ. ನಮ್ಮ ಜೊತೆ ಬಂದವರ ಕೈಯಲ್ಲಿ ಬೆಣಚು ಕಲ್ಲಿನ ಉಂಡೆಯೊಂದಿತ್ತು. ನಾವು ಅದನ್ನು ಯಾಕೆ ಎಂದು ಕೇಳಿದಾಗ ಅದು ಹಂದಿಯನ್ನು ಸಾಯಿಸುವುದಕ್ಕೆ ಎಂದು ತಿಳಿಸಿದರು. ಆ ಉಂಡೆಯನ್ನು ಯಾವುದೋ ಬಾಲೆ ಗಿಡಕ್ಕೆ ಕಟ್ಟಿದರು. ಬಾಳೆಗಿಡ ಅಗೆಯಲು ಬಂದ ಹಂದಿ ಅದನ್ನೂ ಅಗೆದು ಉಂಡೆ ಸಿಡಿದು ಸ್ಥಳದಲ್ಲೇ ಸಾಯುತ್ತದೆಂದು ತಿಳಿಸಿದರು. ನಾವು ಕುತೂಹಲದಿಂದ ನೋಡಿದೆವು.
ಬರುತ್ತಾ ಅವರು ದೂರದಿಂದ ಕಾಟಿಗಳ ಗುಂಪೊಂದನ್ನು ತೋರಿಸಿದರು. ಗುಂಪಿನಲ್ಲಿರುವ ಕಾಡುಕೋಣ ಗಳಿಂದ ಯಾವುದೇ ಭಯವಿಲ್ಲವೆಂದೂ, ಒಂಟಿಯಾಗಿದ್ದರೆ ಮಾತ್ರ ಅಪಾಯವೆಂದೂ ತಿಳಿಸಿದರು. ಆ ರಾತ್ರೆಯಿಡಿ ನಮಗೆ ಕಾಡುಕೋಣದ್ದೇ ಕನಸು.
ಈ ದಿನ ಅರುಣನನ್ನು ನನ್ನ ಪಕ್ಕ ಮಲಗಿಸಿಕೊಳ್ಳದೆ ರಾಘುವಿನ ಬದಿಯಲ್ಲಿ ಮಲಗಿಸಿದೆ. ಆದರೆ ಅರುಣ ಒದ್ದರೂ ರಾಘುವಿಗೆ ಎಚ್ಹ್ಚ್ರವಾಗಲ್ಲಿಲ್ಲವಂತೆ. ರಾತ್ರೆ ಢಂ ಎಂದು ಶಬ್ದ ಕೇಳಿತು. ನಾನು ಹಂದಿ ಸತ್ತಿರಬಹುದು ಎಂದುಕೊಂಡು ಮಗ್ಗುಲಾಗಿ ಮಲಗಿದೆ.
ಬೆಳಗ್ಗೆ ಗಡದ್ದಾಗಿ ತಿಂಡಿ ತಿಂದುಕೊಂಡು ವಾಪಾಸು ಹೊರಟೆವು. ಹಿಂದಿನ ದಿನ ಮಂಕಾಗಿದ್ದ ಅರುಣ ಹುರುಪಿನಿಂದ ಹೊರಟ. ಅದನ್ನು ಕಂಡು ನನಗೆ ಸಂತೋಷವಾಯಿತು. ನಾನು ಮನೆಯವರಿಗೆ ತುಂಬು ಕೃತಜ್ಞತೆ ಅರ್ಪಿಸಿದೆವು. ಅವರು ಮುಂದಿನ ರಜಕ್ಕೆ ಮತ್ತೆ ಬರುವಂತೆ ಹೇಳಿದರು. ಅವರು ಸ್ವಲ್ಪ ದೂರ ಬಂದು ದಾರಿ ತೋರಿಸಿ ಬೀಳ್ಕೊಟ್ಟರು. ಅವರು ತೋರಿಸಿದ ದಾರಿ ನಮ್ಮನ್ನು ಘಟ್ಟಕ್ಕೆ ಕರೆದೊಯ್ಯಲಿತ್ತು. ದಾರಿಯ ಮದ್ಯೆ ನಮಗೆ ತಿನ್ನಲಿಕ್ಕೆ ಕುಟ್ಟವಲಕ್ಕಿ ಮಾಡಿ ಕೊಟ್ಟಿದ್ದರು. ಮದ್ಯೆ ದಾರಿಯಲ್ಲಿ ಹಂದಿ ಸತ್ತಿದೆಯೇ ಎಂದು ನೋಡಿದೆವು. ಅಲ್ಲೆಲ್ಲೂ ಕಾಡು ಹಂದಿಯ ಸುಳಿವಿರಲ್ಲಿಲ್ಲ. ಕೊನೆಗೆ ಒಂದು ಕಡೆ ಕಾಲುದಾರಿಯ ಪಕ್ಕ ಕಾಡು ಹಂದಿಯೊಂದು ಮುಸುಡು ಒಡೆದುಕೊಂಡು ಸತ್ತು ಬಿದ್ದಿತ್ತು. ಕುಟುಕು ಜೀವವನ್ನು ಹಿಡಿದುಕೊಂಡು ಇಷ್ಟು ದೂರ ಬಂದ ಹಂದಿ ನೋಡಿ ನಮಗೆ ಆಶ್ಚರ್ಯವಾಯಿತು.
ನಾವು ಘಟ್ಟವನ್ನು ಹತ್ತಿದಾಗ ಮಧ್ಯಾಹ್ನ ಎರಡು ಗಂಟೆ. ಈ ಭಾರಿ ನಾವು ಇಳಿದ್ದಿದ್ದ ಘಟ್ಟವಲ್ಲದೆ ಪಕ್ಕದ ಘಟ್ಟ ಹತ್ತಿದ್ದೆವು. ಈ ಘಟ್ಟ ದಲ್ಲಿ ಅಷ್ಟೊಂದು ನೆರಳಿಲ್ಲದಿದ್ದರಿಂದ ಘಟ್ಟದಿಂದ ಸ್ವಲ್ಪ ಕೆಳಗೆ ಹೋಗಿ ವಿಶ್ರಮಿಸಿಕೊಂಡೆವು. ಕುಟ್ಟ ವಲಕ್ಕಿ ಖಾಲಿಯಾದ ಮೇಲೆ ಮೂರು ಗಂಟೆ ಯವರೆಗೂ ನಾನು ನದಿಯ ಸೌಂದರ್ಯ ವನ್ನು ಆಸ್ವಾದಿಸಿದೆ. ಕೊನೆಗೆ ಮನೆಯತ್ತ ಸಾಗತೋಡಗಿದಂತೆ ಒಂದು ತರ ಖುಶಿಯಾಗತೊಡಗಿತು. ಯಾವುದೋ ಕಲ್ಪನಾ ಪ್ರಪಂಚದಿಂದ ವಾಸ್ತವದೆಡೆಗೆ ಬಂದಂತೆ ಅನಿಸಿತು. ಶರತ್ ಈ ಮದ್ಯೆ ಏನನ್ನೋ ಗುರುತಿಸಿದ. ಅದು ಮುಳ್ಳು ಹಂದಿಯ ಮುಳ್ಳಗಿತ್ತು. ಅದರ ಗಾತ್ರ ನೋಡಿ ನಾನು ಸೋಜಿಗ ಪಟ್ಟೆ.
ಬರುವಾಗ ನಾವು ಅಬ್ಬಿ ನೀರಿನ ಹಳ್ಳ ಗುರುತಿಸಿದೆವು. ಅದರ ತುಂಬಾ ಜರಿ ಗಿಡ ತುಂಬಿಕೊಂಡಿತ್ತು. ಅದರಿಂದ ನೀರು ಶುಧ್ಧವಾಗಿರುತ್ತದೆ ಎಂದು ಅಜ್ಜ ಆಮೇಲೆ ಹೇಳಿದರು. ನೇರವಾಗಿ ಘಟ್ಟ ಇಳಿದ ಮೇಲೆ ಒಂದು ಸಣ್ಣ ಗುಡ್ಡ ಸಿಗುತ್ತದೆ. ಅದನ್ನು ದಾಟಿದರೆ ನಮ್ಮ ಅಜ್ಜನ ಮನೆ. ಮನೆ ತಲಪುವಷ್ಟರಲ್ಲಿ ಸಂಜೆ ಆರೂ ಮುಕ್ಕಾಲು. ನಾವೆಲ್ಲರೂ ಸುಸ್ತಾಗಿದ್ದೆವು. ಬೇಗ ಊಟ ಮಡಿ ಮಲಗಿದೆವು. ರಾತ್ರೆಯಿಡಿ ಘಟ್ಟದ್ದೆ ಕನಸು !

ಮುಗಿಯಿತು.

No comments:

Post a Comment