Saturday, October 31, 2009

ನಮ್ಮ ಸಾಹಸ ಯಾತ್ರೆ - ಭಾಗ -೧೦ - ಕೈ ಕೊಟ್ಟ ಸಂಕ



ನಾವು ಅವನ ಗುಡಿಸಲಿಂದ ಹೊರಟಾಗ ಐದು ಕಾಲಾಗಿತ್ತು. ಬೇಗ ಅವರ ಮನೆ ತಲುಪಲು ಜೋರಾಗಿ ನಡೆಯುತ್ತಿದ್ದೆವು. ಅರುಣ ನಮ್ಮ ಜೊತೆ ನಡೆಯಲಾರದೆ ಓದಿ ಬರುತ್ತಿದ್ದ. ಕಾಡು ಮೊದಲಿನಷ್ಟು ದಟ್ಟವಲ್ಲದ್ದಿದ್ದರೂಕಾಲು ದಾರಿಯೇನು ಇರಲ್ಲಿಲ್ಲ. ನಾವು ಹೋಗಿದ್ದೆ ದಾರಿಯಾಗಿತ್ತು. ಬಹುಶಃ ಮಳೆಗಾಲದ ನಂತರ ಕಾಲು ದಾರಿ ಮುಚ್ಚಿ ಹೋಗಿರಬೇಕು. ಆತನ ಮನೆಯಿಂದ ಸ್ವಲ್ಪ ದೂರ ಕಾಲು ದಾರಿ ಇತ್ತಷ್ಟೇ. ನಾವೆಲ್ಲಿ ದಿಕ್ಕು ತಪ್ಪಿ ಕಾಡು ಪಾಲಾಗುತ್ತೆವೋ ಎಂದು ಹೆದರಿಕೆ ಯಾಯಿತು. ಅಷ್ಟರಲ್ಲಿ ಒಂದು ಹೊಳೆ ಹರಿಯುತ್ತಿರುವ ಶಬ್ದ ಕೇಳಿ ಬಂತು. ಸ್ವಲ್ಪ ಹೊತ್ತಿನ ನಂತರ ಒಂದು ಚಿಕ್ಕ ಹಳ್ಳ ನಮಗೆ ಎದುರಾಯಿತು. ನಾವು ಒಟ್ಟು ಹೇಗೋ ನಡೆದು ಬಂದಿದ್ದರೂ ಹೆಚ್ಚು ಕಡಿಮೆ ಸರಿ ದಾರಿಗೆ ಬಂದಿದ್ದೆವು. ಏಕೆಂದರೆ ಸ್ವಲ್ಪ ದೂರದಲ್ಲಿಯೇ ಹಳ್ಳ ದಾಟಲು ಹಾಕಿದ್ದ ಸಂಕ ಕಾಣಿಸಿತು. ನಾವು ಅದರ ಬಳಿ ಹೋಗಿ ನೋಡಿದರೆ ಎರಡು ಮರಗಳನ್ನು ಉದ್ದಕ್ಕೆ ಹಾಸಿದ್ದರು. ನಾನು ನಿದಾನ ಒಬ್ಬೊಬ್ಬರಾಗಿ ದಾಟಬೇಕೆಂದು ಹೇಳಿದೆ. ಮೊದಲು ತಾನು ದಾಟುತ್ತೆನೆಂದು ಶರತ್ ಬಂದ. ಆತ ನಿದಾನ ಕೂತುಕೊಂಡು ತೆವಳುತ್ತ ದಾಟಿದ. ನಾನು ಸಹ ಆತನಂತೆ ಕುಳಿತು ಸಂಕದ ಮೇಲೆ ಕಾಲಿಡುತ್ತಿದ್ದಂತೆ ಅದು ಶಬ್ದ ಮಾಡುತ್ತಾ ಮುರಿದು ಬಿತ್ತು. ಶರತ್ ನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ. ನೀರು ಹತ್ತು, ಹನ್ನೆರಡು ಅಡಿ ಆಳದಲ್ಲಿ ಹರಿಯುತ್ತಿತ್ತು. ಇವನೆನಾದರು ಬಿದ್ದಿದ್ದರೆ ಬೆನ್ನು, ಕೈ ಕಾಲು ಮುರಿದುಕೊಳುತ್ತಿದ್ದಿದ್ದು ಖಚಿತವಾಗಿತ್ತು. ಸಮಯ ಬೇರೆ ಜಾರುತ್ತಿತ್ತು. ಹಕ್ಕಿಗಳೆಲ್ಲ ಗೂಡಿಗೆ ಹಿಂದಿರುಗುತ್ತಿದ್ದವು. ಈಗ ಹಳ್ಳ ಇಳಿದು ಹತ್ತುವುದೊಂದೇ ಅದನ್ನು ದಾಟಲು ಉಳಿದ ಮಾರ್ಗವಾಗಿತ್ತು. ನಾನು ಮೊದಲು ಅರುಣನನ್ನು ಇಳಿಸಿದೆ. ನಂತರ ರಾಘು ನನ್ನ ಕೈ ಹಿಡಿದುಕೊಂಡ. ನಾನು ನಿದಾನ ಇಳಿದೆ. ಅನಂತರದ ಸರದಿ ರಾಘುವಿನದ್ದಗಿತ್ತು. ಆತ ಯಾವುದೋ ಮರದ ಬೇರು ಹಿಡಿದು ಇಳಿಯಲು ಪ್ರಯತ್ನಿಸಿದ. ನಾನು ಆತನನ್ನು ಕೆಳಗಿನಿಂದ ಹಿಡಿದುಕೊಂಡೇ. ಆರದೆ ಒಮ್ಮೆಲೇ ಆತ ಕೈ ಜಾರಿ ಬಿದ್ದು ಬಿಟ್ಟ. ಅರ್ದ ಇಳಿದ್ದಿದ್ದರಿಂದ ಏನು ಪೆಟ್ಟಾಗದೆ ಬಚಾವಾದ. ಆತನ ಮೈ ಎಲ್ಲ ಒದ್ದೆಯಾಗಿತ್ತು. ಆ ದಾದಾ ಹತ್ತುವಷ್ಟರಲ್ಲಿ ಎಲ್ಲರೂ ಉಸ್ಸಪ್ಪ ಎಂದು ಕುಳಿತುಬಿಟ್ಟೆವು. ಹೀಗೆ ಕಾಲು ಗಂಟೆ ನಷ್ಟವಾಯಿತು. ಈಗ ಸೂರ್ಯ ಮೂರ್ತಿ ಮುಳುಗಿದ್ದ. ಕತ್ತಲೆ ನಿದಾನ ಆವರಿಸುತ್ತಿತ್ತು. ನಾವು ಕೈ ಕೊಟ್ಟ ಸಂಕವನ್ನೇ ಬೈಯುತ್ತ ಹೊರಟೆವು. ನಿಧಾನವಾಗಿ ಮರ ಗಿಡಗಳು ಮಸುಕಾಗತೊದಗಿದವು. ರಾತ್ರಿಯಲ್ಲಿ ಕೂಗುವ ಜೀರುಂಡೆಗಳು ತಮ್ಮ ಕೂಗನ್ನು ಪ್ರಾರಂಭಿಸಿದ್ದವು. ಅಷ್ಟರಲ್ಲಿ ರಾಘು ಸಣ್ಣದೊಂದು ಟಾರ್ಚ್ ತೆಗೆದ. ಅವನು ಸ್ಕೌಟ್ ನಲ್ಲಿದ್ದರಿಂದ ಕಾಡಿನಲ್ಲೆಲ್ಲ ಕ್ಯಾಂಪ್ ಮಾಡಿ ಅನುಭವ ಇತ್ತು. ಆದ್ದರಿಂದ ಸಾಮಾನ್ಯವಾಗಿ ಬೇಕಾಗುವ ಸಾಮಗ್ರಿಗಳನ್ನೆಲ್ಲಾ ತಂದಿದ್ದ. ಆ ಸಣ್ಣ ಟಾರ್ಚ್ ನಾಲ್ಕು ಜನಕ್ಕೆ ಯಾವ ರೀತಿಯಿಂದಲೂ ಸಾಲುತ್ತಿರಲ್ಲಿಲ್ಲ. ಆದರೂ ಹೇಗೋ ಹೆಜ್ಜೆ ಹಾಕಿದೆವು. ಒಮ್ಮೆಯಂತೂ ಒಂದು ಕಾಡು ಬೆಕ್ಕು ಅಡ್ಡ ಬಂದು ನಮ್ಮೆಲ್ಲರ ಭಯಕ್ಕೆ ಕಾರಣವಾಯಿತು. ಅದರ ಹೊಳೆಯುವ ಕಣ್ಣು ಕಂಡು ನಮಗೆ ಭಯವಾಗಿತ್ತು.


ಅಂತೂ ಇಂತೂ ಯಾವುದೋ ಜಾನುವಾರುಗಳು ಮಾಡಿಟ್ಟ ದಾರಿ ಎದುರಾಯಿತು. ಕಾಡು ಮುಗಿದು ತಣ್ಣನೆಯಾ ಗಾಳಿ ಮುಖಕ್ಕೆ ರಾಚಿತು. ನಾವೆಲ್ಲರೂ ನದಿ ಹತ್ತಿರ ಬಂತೆಂದು ಅಂದಾಜು ಮಾಡಿದೆವು. ಆದರೆ ನಾವು ನಡೆಯುತ್ತಿರುವ ದಾರಿಯು ಕೆಸರುಮಯವಾಗಿದ್ದು ನಮ್ಮ ಮೈ ಕೈ ಎಲ್ಲ ಕೆಸರಾಯಿತು. ನಂತರ ಒಂದು ಕಾಲುವೆಯನ್ನು ದಾಟಿದೆವು. ಕಾಲುವೆಯ ಪಕ್ಕದಲ್ಲೇ ಗದ್ದೆ ಇತ್ತು. ಗದ್ದೆಯ ಮೂಲಕ ಸಾಗುತ್ತಿದ್ದಾಗ ದೂರದಲ್ಲಿ ಮಿಣುಕು ದೀಪ ಕಂಡು ನಮಗೆ ಧೈರ್ಯ ತಂದು ಕೊಟ್ಟಿತು. ಇಷ್ಟು ಹೊತ್ತು ಯಾವುದೋ ಕ್ಷೋಭೆಗೆ ಒಳಗಾಗಿದ್ದ ಮನಸ್ಸು ಹಗುರವಾಯಿತು. ಕೊನೆಗೂ ಆ ಮನೆ ತಲುಪಿದೆವು. ಅದು ನಾವೆಣಿಸಿದಂತೆ ಅಜ್ಜ ಹೇಳಿದ ಮನೆ ಆಗಿತ್ತು. ಅವರು ನಮ್ಮ ಇತ್ಯೋಪಾಹಾರಿಗಳನ್ನು ವಿಚಾರಿಸಿ ಅಥಿತ್ಯಕ್ಕೆ ಮುಂದಾದರು. ಅವರ ಮನೆಗೆ ಎಲ್ಲೋ ಒಮ್ಮೊಮ್ಮೆ ಮಾತ್ರ ನೆಂಟರು ಬರುತ್ತಿದ್ದರು ಅನ್ನಿಸುತ್ತೆ. ರಾತ್ರೆ ಒಂಬತ್ತರವರೆಗೂ ಕೊರೆದರು. ಅರುಣ ಮಾತ್ರ ಯಾವ ಮುಲಾಜಿಲ್ಲದೆ ಪಕ್ಕದ ಗೋಡೆಗೆ ಒರಗಿ ನಿದ್ದೆ ಹೊಡೆದ. ನಂತರ ಆತನ್ನನ್ನು ಊಟಕ್ಕೆ ಎಬ್ಬಿಸಲಾಯಿತು. ನಮಗೆ ಹಸಿವಾಗಿದ್ದಕ್ಕೋ ಏನೋ ಊಟ ತುಂಬ ರುಚಿಸಿತು. ಅವರ ಹತ್ತು ವರ್ಷದ ಮಗ ನಮ್ಮ ಜೊತೆ ಬೇಗ ಸ್ನೇಹ ಬೆಳೆಸಿದ. ಆ ರಾತ್ರಿ ಆತ ನಮ್ಮ ಜೊತೆ ಮಲಗಿದ. ದೇಹ ತುಂಬ ದನಿದ್ದಿದ್ದರಿಂದ ಬೇಗ ನಿದ್ದೆ ಹತ್ತಿತು. ಅರುಣ ಮದ್ಯ ರಾತ್ರೆ ಒದೆಯುತ್ತಿದ್ದ. ಆಗ ಮಾತ್ರ ಒಂದೆರಡು ಭಾರಿ ಎಚ್ಚರವಾಗಿತ್ತು.



ಮುಂದಿನ ಭಾಗದಲ್ಲಿ : ನಿಗೂಡ ದ್ವೀಪ.

Friday, October 30, 2009

ನಮ್ಮ ಸಾಹಸ ಯಾತ್ರೆ - ಭಾಗ -೯ - ನದಿಯ ಕಡೆಗೆ

ಎಲ್ಲರೂ ಹೊಸ ಹುರುಪಿನಿಂದ ಘಟ್ಟ ಇಳಿಯತೊಡಗಿದೆವು. ಘಟ್ಟ ಬಹಳ ಕಡಿದಾಗಿತ್ತು. ನಾನು ಶೂ ಹಾಕಿಕೊಂಡು ಬಂದಿದ್ದರಿಂದ ತೊಂದರೆ ಇರಲ್ಲಿಲ್ಲ. ಉಳಿದ ಮೂವರು ಚಪ್ಪಲಿಗಳನ್ನು ಕೈ ಯಲ್ಲಿ ಹಿಡಿದುಕೊಂಡು ದೇಹದ ಬಲವನ್ನು ನಿಯಂತ್ರಿಸುತ್ತಾ ಇಳಿಯುತ್ತಿದ್ದರು. ಸಾಮಾನುಗಳನ್ನೆಲ್ಲ ಹೆಗಲಿಗೆ ನೇತು ಹಾಕಿಕೊಂಡಿದ್ದೆವು. ಘಟ್ಟ ಇಳಿಯುತ್ತಾ ಹೋಗುತ್ತಿದ್ದಂತೆ ಕಾಡು ಮತ್ತೆ ದಟ್ಟವಾಗತೊಡಗಿತು. ಕಡಿದಾದ ಭಾಗವೆಲ್ಲಾ ಮುಗಿದೊಡನೆ ವಿಶ್ರಾಂತಿ ತೆಗೆದುಕೊಂಡೆವು. ಈಗ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಕಣ್ಣಿಗೆ ಬೀಳತೊಡಗಿದವು. ಕಾಡೊಳಗೆ ತುಂಬ ತಂಪಿತ್ತು. ನಾವೆಲ್ಲಾ ಹೀಗೆ ಕುಳಿತಿರುವಾಗ ಒಂದು ಮುಂಗಸಿ ದೂರದಲ್ಲಿ ಬರುವುದು ಕಾಣಿಸಿತು. ನಾವೆಲ್ಲರೂ ಸುಮ್ಮನೆ ಕುಳಿತು ಗಮನಿಸತೊಡಗಿದೆವು. ಅದಕ್ಕೆ ನಾವಿರುವುದು ತಿಳಿಯಿತು ಅಂತ ಅನ್ನಿಸುತ್ತೆ , ಮಿಂಚಿನಂತೆ ಯಾವುದೊ ಪೊದೆಯೊಳಗೆ ನುಗ್ಗಿತು. ನಂತರ ನಾವು ಮತ್ತೆ ಹೊರಟೆವು. ಈ ಭಾರಿ ನಾವು ಒಂದು ಕಪಿ ಸಮೂಹವನ್ನು ಎದುರುಗೊಂದೆವು. ಇದು ಕಪ್ಪು ಮೂತಿ ಮುಸಿಯವಾಗಿತ್ತು. ಅವೆಲ್ಲ ನಮ್ಮನ್ನು ಕಂಡು ಮರ ಏರಿ ಕುಳಿತವು. ಸಂಜೆಯಾಗುತ್ತಿದ್ದಂತೆ ದೂರದಲ್ಲೆಲ್ಲೋ ನವಿಲುಗಳ ಕೂಗಾಟ ಕೇಳಿತು. ಮಲೆನಾಡಿನಲ್ಲಿ ನವಿಳುಗಲೇನು ಅಪರೂಪವಲ್ಲ.

ನಾವು ಮುಂದುವರೆಯುತ್ತಿದ್ದಂತೆ ನಾವು ಹೋದದ್ದೇ ದಾರಿಯಾಯಿತು. ಒಮ್ಮೊಮ್ಮೆ ಕಾಡು ಎಷ್ಟು ಅಭೆದ್ಯವಾಗಿತ್ತೆಂದರೆ ನಾವು ಯಾವುದ್ಯಾವುದೋ ಕಾಡು ಪ್ರಾಣಿಗಳು ಮಾಡಿದ್ದ ದಾರಿಯಲ್ಲಿ ನುಸಿದು ಹೋಗುವ ಪರಿಸ್ಥಿತಿ ಬಂತು. ಸ್ವಲ್ಪ ದೂರ ಹೋಗುತ್ತಿದ್ದಂತೆ ದೂರದಲ್ಲೆಲ್ಲೋ ನಾಯಿಗಳ ಬೊಗಳುವಿಕೆ ಕೇಳಿಸಿತು. ಇದರಿಂದ ಹತ್ತಿರದಲ್ಲೆಲ್ಲೋ ಜನ ವಸತಿಯಿದೆ ಎಂದು ಅರ್ಥವಾಯಿತು. ಅಂತೂ ದಟ್ಟವಾದ ಕಾಡು ಮುಗಿದು ಬಯಲು ಎದುರಾಯಿತು. ಬಯಲಿನ ಆಚೆ ತುದಿಯಲ್ಲಿ ಒಂದು ಗುಡಿಸಲು ಇತ್ತು. ನಾವು ಅದನ್ನು ಸಮೀಪಿಸುತ್ತಿದ್ದಂತೆ ಒಂದು ಕಂತ್ರಿ ನಾಯಿ ವಿಪರೀತ ಗಲಾಟೆ ಎಬ್ಬಿಸಿತು. ಅದನ್ನು ಕೇಳಿ ಆ ಗುಡಿಸಲಿನ ಯಜಮಾನ ಹೊರಕ್ಕೆ ಬಂದ. ಆತ ಕಟ್ಟು ಮಸ್ತಗಿದ್ದು ಶ್ರಮಜೀವಿಯ ಹಾಗೆ ಕಂಡು ಬಂದ. ಆತನ ಸೊಂಟದಲ್ಲಿದ್ದ ಲಂಗೋಟಿ ಬಿಟ್ಟರೆ ಮೈ ಮೇಲೆ ಇನ್ನ್ಯಾವುದೇ ವಸ್ತ್ರವಿರಲ್ಲಿಲ್ಲ. ನಮ್ಮನ್ನು ನೋಡಿ ಯಾರು? ಎಂದು ಕೇಳಿದ. ಆ ನಾಯಿಯ ಗಲಾಟೆಯಲ್ಲಿ ನಮಗೆ ಆತ ಹೇಳಿದ್ದು ಕೇಳಿಸಲ್ಲಿಲ್ಲ. ಕೊನೆಗೆ ನಾಯಿಯನ್ನು ಓಡಿಸಿ ಮತ್ತೆ ಪ್ರಶ್ನಿಸಿದ. ನಾವು ನದಿ ನೋಡ ಬಂದವರೆಂದು. ನಮಗೆ ಸ್ವಲ್ಪ ನೀರಿದ್ದರೆ ಕೊಡಬೇಕೆಂದು ಕೇಳಿದೆವು. ಆತ ನೀರು ತಂದು ಕೊಡುತ್ತಾ ರಾತ್ರಿ ಎಲ್ಲಿ ಉಳಿಯುತ್ತೀರಿ ಎಂದು ಕೇಳಿದ. ನಾವು ಅಜ್ಜ ತಿಳಿಸಿದ ಮನೆಯವರ ಬಗ್ಗೆ ಹೇಳಿದೆವು. ಆತ ನಾವು ದಿಕ್ಕು ತಪ್ಪಿ ಬಂದಿದ್ದೇವೆಂದು ಅವರ ಮನೆಗೆ ಹೋಗಲು ನಾವಿಳಿದ ಘಟ್ಟದ ಪಕ್ಕದ ಘಟ್ಟದಿಂದ ಇಳಿಯಬೇಕ್ಕಿತ್ತೆಂದು ತಿಳಿಸಿದ. ಅಲ್ಲಿಗೆ ಈಗ ಹೋಗಬಹುದೇ ಎಂದು ವಿಚಾರಿಸಿದಾಗ ಹೋಗಬಹುದೆಂದು, ಆದರೆ ಮದ್ಯೆ ಕಾಡು ದಾಟಬೇಕಾಗುತ್ತದೆ, ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ ಎಂದು ಹೇಳಿದ. ನಮ್ಮ ಬಳಿ ಹೆಚ್ಚು ಸಮಯವಿರಲ್ಲಿಲ್ಲ. ಕತ್ತಲಾಗುವುದಕ್ಕಿಂತ ಮೊದಲು ಅಲ್ಲಿಗೆ ಹೋಗಿ ತಲಪಬೇಕೆಂದು ಎದ್ದೆ. ಆತನ ಮನೆಯ ಸುತ್ತ ಹಾವು, ಮುಂಗಸಿ ಇತ್ಯಾದಿ ಪ್ರಾಣಿಗಳ ಚರ್ಮ ನೇತು ಹಾಕಿದ್ದ. ಅಲ್ಲೇ ಹತ್ತಿರದಲ್ಲಿ ಮೊಲ ಹಿಡಿಯುವ ಬೋನಿತ್ತು. ರಾಘು ಅದನ್ನು ಕಂಡು ಸಿಟ್ಟಿಗೆದ್ದು ಆತನಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಉಪದೇಶ ಪ್ರಾರಂಬಿಸಿದ. ನಾನು ಕೊನೆಗೆ ಕಟ್ಟಲಾಗುತ್ತದೆ ಎಂದು ಆತನನ್ನು ಎಬ್ಬಿಸಿಕೊಂಡು ಹೊರಡಬೇಕಾಯಿತು. ಆ ಮನುಷ್ಯ ನಾವೀಗ ಹೋಗಕೂಡದೆಂದು ಕತ್ತಲಲ್ಲಿ ಹಾವು, ಹರಣೆ ಇರುತ್ತದೆ ಎಂದ. ನಮಗೆ ಹೊರಡದೆ ಗತ್ಯಂತರವಿರಲ್ಲಿಲ್ಲ. ಆತನ ಮನೆಯಲ್ಲಿ ಉಳಿಯುವುದು ಸಾದ್ಯವೇ ಇರಲ್ಲಿಲ್ಲ. ಸತ್ತ ಪ್ರಾಣಿಗಳ ನಾತ ಮನೆ ತುಂಬ ಹರಡಿತ್ತು. ಅದ್ದರಿಂದ ದೃಡ ಮನಸ್ಸು ಮಾಡಿ ಹೊರಟೆ ಬಿಟ್ಟೆವು. ಕೊನೆಗೆ ನಮ್ಮ ಈ ನಿರ್ಧಾರ ಎಷ್ಟು ಅಪಾಯಕಾರಿಯಾಗಿತ್ತು ಎಂಬುದನ್ನೂ ಮನಗೊಂಡೆವು .

ಮುಂದಿನ ಭಾಗದಲ್ಲಿ - ಕೈ ಕೊಟ್ಟ ಸಂಕ.

Wednesday, October 28, 2009

ನಮ್ಮ ಸಾಹಸ ಯಾತ್ರೆ - ಭಾಗ -೮ - ಘಟ್ಟದ ಮೇಲೆ

ಹೀಗೆ ಘಟ್ಟದ ತುದಿ ತಲುಪುವಷ್ಟರಲ್ಲಿ ಮಧ್ಯಾಹ್ನ ಒಂದೂ ಹತ್ತಾಗಿತ್ತು. ಎದುರಿಗೆ ರುದ್ರ ರಮಣೀಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ನಾವು ಮರದ ತಂಪಲು ಹುಡುಕಿ ಅಲ್ಲಿ ಕುಳಿತುಕೊಂಡೆವು. ನದಿಯು ಮಹಾಸಾಗರದಂತೆ ಹರಡಿಕೊಂಡಿತ್ತು. ಮದ್ಯೆ ಒಂದೆರಡು ದ್ವೀಪ ಕಾಣುತ್ತಿದ್ದವು. ಘಟ್ಟದ ಮೇಲೆ ಕುಳಿತು ಚಪಾತಿ ಖಾಲಿ ಮಾಡತೊಡಗಿದೆವು. ಬರುತ್ತಾ ಇಷ್ಟು ಚಪಾತಿ ಏಕೆ ನಾವೇನು ಕಾಶಿ, ರಾಮೇಶ್ವರಕ್ಕೆ ಹೊರಟಿದ್ದೆವೇನುಎಂದು ಅಜ್ಜಿಯನ್ನು ಬಯುತ್ತಾ ಚಪಾತಿ ತಂದಿದ್ದೆವು. ಈಗ ನೋಡಿದರೆ ತಂದಿದ್ದು ಸಾಲುವುದಿಲ್ಲವೇನೋ ಅನ್ನಿಸುವಷ್ಟು ಹಸಿವಾಗಿತ್ತು. ಚಪಾತಿ ಜೊತೆ ನೆಂಜಿಕೊಳ್ಳಲು ಹಾಕಿದ್ದ ತುಪ್ಪ, ಸಕ್ಕರೆ, ಚಟ್ನಿ ಇತ್ಯಾದಿಗಳು ಬಹಳ ರುಚಿಯಾಗಿ ಕಂಡು ಬಂತು. ರಾಘುಶರತ್ ನೀರನ್ನು ಅರಸಿ ಘಟ್ಟ ಇಳಿಯತೊಡಗಿದರು. ನಾವು ತಂದಿದ್ದ ನೀರೆಲ್ಲಾ ಖಾಲಿಯಾಗಿ ಅಬ್ಬಿ ನೀರನ್ನು ಅರಸಿ ಅವರು ಹೋಗಿದ್ದರು. ಅರುಣ ಒಂದು ಮರದ ಬುಡದಲ್ಲಿ ಬಿದ್ದುಕೊಂಡಿದ್ದ. ನಾನು ಒಂದು ಬಂಡೆಗೆ ಒರಗಿಕೊಂಡು ನದಿಯ ಸುನ್ದರ್ಯ ವನ್ನು ಅಸ್ವಾದಿಸುತ್ತಿದ್ದೆಆ ಬಿರು ಬಿಸಿಲಲ್ಲಿ ಯಾವ ಪ್ರಾಣಿ, ಪಕ್ಷಿಗಳೂ ಕಂಡು ಬರಲ್ಲಿಲ್ಲ. ಎರಡು ಮೂರು ಹದ್ದುಗಳು ಆಹಾರಕ್ಕಾಗಿ ಆಕಾಶದಲ್ಲಿ ಸುತ್ತು ಹೊಡೆಯುತ್ತಿದ್ದವು. ನಾನು ಹಾಗೆ ನಿದ್ದೆ ಹೋದೆ. ಶರತ್, ರಾಘು ಬಂದು ಎಬ್ಬಿಸಿದರು. ಆಗ ಗಂಟೆ ಎರಡೂವರೆಯಾಗಿತ್ತು ಒಂದೆರಡು ಸೌತೆಕಾಯಿ ಹೆಚ್ಚಿದ್ದರು. ಅದಕ್ಕೆ ಉಪ್ಪು, ಮೆಣಸಿನ ಕಾಯಿ, ನಿಂಬೆ ರಸ ಬೆರೆಸಿ ನೆಂಜಿಕೊಳ್ಳಲು ಉಪ್ಪು ಕಾರ ತಯಾರಿಸಿದ್ದರು. ನಾನು, ಅರುಣ ಎದ್ದು ಸೌತೆ ಕಾಯಿtಇನ್ದೆವು . ಸ್ವಲ್ಪ ಹೊತ್ತು ವಿಶ್ರಾಂತಿಯ ನಂತರ ಪ್ರಯಾಣ ಮುಂದುವರೆಸಿದೆವು.

ಮುಂದಿನ ಭಾಗದಲ್ಲಿ - ನದಿಯ ಕಡೆಗೆ.

Tuesday, October 27, 2009

ನಮ್ಮ ಸಾಹಸ ಯಾತ್ರೆ - ಭಾಗ - ೭ - ಘಟ್ಟದ ಹಾದಿ

ಎಲ್ಲಾರೂ ಹೊಳೆಯ ದಡದಲ್ಲೇ ನಡಿಯತೊಡಗಿದೆವು

ನಾವು ಬೇಗ ಬೇಗ ಎದ್ದು ತಯಾರಾದೆವು. ತಿಂಡಿ, ತೀರ್ಥ ಮಾಡಿ ಮುಗಿಸುವಷ್ಟರಲ್ಲಿ ಅರುಣ ಹಾಜರಾಗಿದ್ದ. ಯಾವತ್ತೂ ಬೆಳಗ್ಗೆ ಎಂಟರ ಒಳಗೆ ಎದ್ದು ಗೊತ್ತಿಲ್ಲದ ಆತ ಬೆಳಗ್ಗೆ ಆರೂವರೆಗೆ ಎದ್ದು ಬಂದಿದ್ದು ಸೋಜಿಗವೆನಿಸಿತು. ನಾವು ತಿಂಡಿ, ಕುಡಿಯುವ ನೀರು, ಒಂದೆರಡು ಜೊತೆ ಬಟ್ಟೆ, ಟವೆಲ್ ಇತ್ಯಾದಿ ತೆಗೆದುಕೊಂಡು ಹೊರಡಲು ಅಣಿಯಾದೆವು. ಅರುಣ ಕೂತಲ್ಲೇ ತೂಕಡಿಸುತ್ತಿದ್ದ. ಅವನನ್ನು ಎಬ್ಬಿಸಿಕೊಂಡು ಹೊರಟೆವು. ಹೊರಡುವಾಗ ಅಜ್ಜ, ಅಜ್ಜಿ 'ಜಾಗ್ರತೆ', 'ನದಿಯಲ್ಲಿ ಈಜಲು ಹೋಗಬೇಡಿ' ಇತ್ಯಾದಿ ಎಚ್ಚರಿಕೆಯ ಮಾತನ್ನು ಹೇಳಿದರು. ಅರುಣನ ಮನೆಯಲ್ಲಂತೂ ಹಿಂದಿನ ದಿನ ಮುಂಜಾಗ್ರತೆ ಬಗ್ಗೆ ಅರ್ಧ ಗಂಟೆ ಕೊರೆದಿದ್ದರು. ನಾವು ಘಟ್ಟದ ಇನ್ನೊಂದು ಮಗ್ಗುಲಿಗೆ ಹೋಗಿ ಅಲ್ಲಿರುವವರ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೆವು. ಇದನ್ನೇ ಮನೆಯಲ್ಲಿ ಹೇಳಿದ್ದೆವು. ಆದರೆ ಅಲ್ಲಿಗೆ ಹೋದ ಮೇಲೆ ನಮ್ಮ ಹಂಚಿಕೆ ಬದಲಾಯಿತು.



ಅದು ಅಕ್ಟೋಬರ್ ಸಮಯವಾದ್ದರಿಂದ ನಮ್ಮ ಮನೆಯ ಹಿಂದಿನ ಜಲಪಾತದಲ್ಲಿ ತೆಳ್ಳಗೆ ನೀರು ಬೀಳುತ್ತಿತ್ತು. ಆ ಹಳ್ಳದಲ್ಲಿ ಹೋದರೆ ಅದು ಘಟ್ಟದಿಂದ ಬಂದಿರುವುದರಿಂದ ಘಟ್ಟಕ್ಕೆ ಹೋಗುವುದು ಸುಲುಭವಾಗುತ್ತದೆ ಎಂದು ನಮ್ಮ ಹಂಚಿಕೆ. ಅದರ ಪ್ರಕಾರ ಆ ಹಳ್ಳದ ದಡದಲ್ಲೇ ನಡೆಯುತ್ತಾ ಸಾಗಿದೆವು. ಹೀಗೆ ನಮ್ಮ ಘಟ್ಟದ ಯಾತ್ರೆ ಆರಂಭವಾಯಿತು.



ಒಂದು ಗಂಟೆ ಹೊಳೆಯಲ್ಲಿ ನಡೆಯುವಷ್ಟರಲ್ಲಿ ನಮ್ಮೆಲ್ಲರಿಗೂ ಸುಸ್ತಾಯಿತು. ಅಲ್ಲೇ ಪಕ್ಕದಲ್ಲಿ ಒಂದು ಬಂಡೆಯ ಮೇಲೆ ಕುಳಿತೆವು. ಮದ್ಯೆ ಬರುವಾಗ ಒಂದು ಕೆರೆ ಹಾವನ್ನು ನೋಡಿದ್ದೆವು. ನಾನು ರಾಘುವಿನ ಬಳಿ ಕೆರೆ ಹಾವು ಹೆಣ್ಣು, ನಾಗರ ಹಾವು ಗಂಡು ಎನ್ನುತ್ತಾರೆ ನಿಜವೇ ಎಂದು ಅನುಮಾನ ವ್ಯಕ್ತಪಡಿಸಿದೆ. ರಾಘುವೂ ತನಗೆ ಸಹಿತ ಸರಿಯಾಗಿ ಗೊತ್ತಿಲ್ಲ ಎಂದ. ಅರುಣ "ಸುಧಿಯಣ್ಣ ಘಟ್ಟದ ಮೇಲೆ ಕಾಡುಕೋಣ ಇರುವುದು ನಿಜವೇ?" ಎಂದು ನನ್ನನು ಪ್ರಶ್ನಿಸಿದ. ನಾನು "ಘಟ್ಟದ ಕೆಳಗಿನ ಬಯಲ್ಲಲ್ಲಿ ಇರಬಹುದು" ಎಂದೆ. ಶರತ್ "ಮುಳುಗಡೆ ಕಾಡು ಎಂದರೇನು" ಅಂತ ಕೇಳಿದ. ಅದಕ್ಕೆ ರಾಘು "ಅಣೆಕಟ್ಟು ಕಟ್ಟಿದ ಮೇಲೆ ಮುಳುಗಡೆಯಾಗಿ ಉಳಿದ ಕಾಡೇ ಮುಳುಗಡೆ ಕಾಡು" ಎಂದ. ಹೀಗೆ ನಮ್ಮ ಸಂಭಾಷಣೆ ಎಲ್ಲಿಂದ ಎಲ್ಲಿಗೋ ಸಾಗುತ್ತಿತ್ತು. ನಾನು ಸಮಯ ನೋಡಿ ಲೇಟಾಗುತ್ತದೆ, ಕೊನೆಗೆ ಸೂರ್ಯ ನೆತ್ತಿಯ ಮೇಲೆ ಬಂದರೆ ನಡೆಯುವುದು ಕಷ್ಟ ಎಂದೆಚ್ಚರಿಸಿದೆ. ನಂತರ ಎಲ್ಲರೂ ಹೊರಟೆವು. ಹೋಗುತ್ತಾ ಹೋಗುತ್ತಾ ಹಳ್ಳದ ಸುತ್ತಲ ಕಾಡು ದತ್ತವಾಗುತ್ತಿರುವುದನ್ನು ಗಮನಿಸಿದೆ. ಕೊನೆಗೆ ಹಳ್ಳದ ಪಕ್ಕ ಒಂದು ಕಾಲು ದಾರಿ ಕಂಡು ಹಳ್ಳಕ್ಕೆ ವಿದಾಯ ಹೇಳಿ ಅದರ ಮೂಲಕ ಹೋಗತೊದಗಿದೆವು. ಕಾಡು ಅಭೆದ್ಯವಾಗಿ ಬೆಳೆದು ಕೆಲವು ಕಡೆಯಂತೂ ಕತ್ತಿಯಿಂದ ಸವರಿಕೊಂಡು ಮುಂದುವರೆಯಬೇಕಾಗಿತ್ತು. ಕೊನೆಗೆ ಒಂದು ಚಿಕ್ಕ ಗುಡ್ಡ ಹತ್ತಿದೆವು. ಅಷ್ಟರಲ್ಲಿ ಕಾಡು ಮುಗಿಯುತ್ತ ಬಂದು ಗುಡ್ಡದ ತುದಿಗೆ ಬಂದೆವು. ಘಟ್ಟ ಈಗ ಹತ್ತಿರದಿಂದ ಕಾಣುತ್ತಿತ್ತು. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಘಟ್ಟಗಳ ದಿಕ್ಕಿನತ್ತ ಪ್ರಯಾಣ ಮುಂದುವರೆಸಿದೆವು. ಮದ್ಯೆ ನೇರಳೆ, ನೆಲ್ಲಿ, ಹೊಳೆ ದಾಸವಾಳ, ಮುಳ್ಳು ಹಣ್ಣಿನ ಗಿಡಗಳು ಏನಾದರೂ ಕಣ್ಣಿಗೆ ಬಿದ್ದರೆ ವೇಗ ಕಡಿತಗೋಳ್ಳುತ್ತಿತ್ತು.



ಮುಂದಿನ ಭಾಗದಲ್ಲಿ : ಘಟ್ಟದ ಮೇಲೆ ನಾವು.

Monday, October 26, 2009

ನಮ್ಮ ಸಾಹಸ ಯಾತ್ರೆ - ಭಾಗ - ೬ - ನಮ್ಮ ನಿರ್ಧಾರ

ಅಷ್ಟರಲ್ಲಿ ಶರತ್, ಅರುಣ ಒಂದು ಪ್ಲಾಸ್ಟಿಕ್ ಕವರ್ ತುಂಬ ನೇರಳೆ ಹಣ್ಣು ತುಂಬಿಕೊಂಡು ಬಂದಿದ್ದರು. ಅವರೂ ಹಣ್ಣು ತಿನ್ನುತ್ತಾ ಅವನ ಕತೆಗಳನ್ನು ಮೆಲುಕು ಹಾಕತೊಡಗಿದರು. ಘಟ್ಟದಲ್ಲಿ ಈಗಲೂ ಹುಲಿ, ಕಾಡುಕೋಣಗಳು ಇವೆಯಂತೆ. ಆ ನದಿಯ ದಡದಲ್ಲೆಲ್ಲೋ ಒಂದೆರಡು ಕುಟುಂಬಗಳು ವಾಸವಾಗಿವೆಯಂತೆ. ಆ ನದಿಯ ಮದ್ಯೆ ಒಂದು ದ್ವೀಪ ಇದ್ದು ಅಲ್ಲಿ ವಾಸಿಸುತ್ತಿದ್ದ ಮುರಿದ ಮನೆ ಇತ್ಯಾದಿ ಇವೆ ಎಂದು ಹೇಳಿದ್ದ. ಆ ನದಿಯಲ್ಲಿ ಭಯಂಕರ ಮೊಸಳೆಗಳಿವೆ ಎಂದೂ ದ್ವೀಪದಲ್ಲೀಗ ಭೂತಗಳು ಸೇರಿಕೊಂಡಿವೆ ಎಂದೂ ಹೆದರಿಸಿದ್ದ. ಅವನ ವಿವರಣೆಗಳನ್ನೆಲ್ಲ ಕೇಳಿ ನಮಗೆ ಅಲ್ಲಿಗೆ ಹೋಗಿ ಬರಬೇಕು ಎಂದೇನೂ ಅನ್ನಿಸುತ್ತಿತ್ತು. ಆದರೆ ಅದು ಈ ವರೆಗೆ ಸಾದ್ಯವಾಗಿರಲ್ಲಿಲ್ಲ. ಈಗ ಹೇಗೋ ೮-೧೦ ದಿನ ರಜೆ ಉಳಿದಿರುವುದರಿಂದ ಅಲ್ಲಿಗೆ ಹೋಗಿ ಬರೋಣ ಅಂದು ನಿರ್ಧರಿಸಿದೆವು. ಅರುಣ ತಾನು ಬರುತ್ತೇನೆ ಎಂದು ಹಠ ಹಿಡಿದ. ನಮಗೆ ಅವನನ್ನು ಕರೆದುಕೊಂಡು ಹೋಗುವುದೇನು ಸಮಸ್ಯೆಯಾಗಿರಲ್ಲಿಲ್ಲ. ಆದರೆ ಅವನ ಮನೆಯವರನ್ನು ಒಪ್ಪಿಸುವುದೇ ಸಮಸ್ಯೆಯಾಗಿತ್ತು. ರಾಘು ಮರುದಿನ ನಮ್ಮ ಮನೆಯಲ್ಲೇ ಉಳಿದುಕೊಳ್ಳುವುದು, ಕೊನೆಗೆ ಒಟ್ಟಿಗೆ ಎಲ್ಲರೂ ಮುಂಜಾನೆ ಎದ್ದು ಹೊರಡುವುದು ಎಂದು ನಿರ್ಧಾರವಾಯಿತು.

ನಮ್ಮ ಮನೆಯಲ್ಲಿ ಅಜ್ಜ ಒಪ್ಪಿಕೊಂಡರೂ ಅಜ್ಜಿಯನ್ನು ಒಪ್ಪಿಸುವುದು ಸ್ವಲ್ಪ ಕಷ್ಟ ವಾಯಿತು. ಅರುನನಂತೂ ಒಂದು ದಿನವಿಡೀ ಅಳುತ್ತ, ಊಟ ಬಿಟ್ಟು ಹೆದರಿಸಿ ಮನೆಯಲ್ಲಿ ಒಪ್ಪಿಸಿದ್ದ. ರಾಘು ಸಂಜೆ ತನ್ನ ಗಂಟು, ಮೂಟೆ ಹೊತ್ತುಕೊಂಡು ನಮ್ಮ ಮನೆಗೆ ಬಂದ. ರಾಘುವಿನ ಅತ್ತೆ ಕುಟ್ಟವಲಕ್ಕಿ ಮಾಡಿ ಕೊಟ್ಟಿದ್ದರು. ಏಳೆಂಟು ಎಲೆ ಸವತೆ ಕಾಯಿ ತಂದಿದ್ದ. ನಮ್ಮ ಮನೆಯಲ್ಲಿ ಅಜ್ಜಿ ಚಪಾತಿ ತಯಾರಿಸಿ ಇಟ್ಟಿದ್ದರು. ಅರುಣ ತಾನು ಘಟ್ಟಕ್ಕೆ ಹೊರಡುವ ಸುದ್ದಿಯನ್ನು ಊರ ತುಂಬ ತಮಟೆ ಹೊಡೆದುಕೊಂಡು ಬಂದಿದ್ದ. ರಾತ್ರಿ ಕನಸಲ್ಲಂತೂ ನಮಗೆ ಹುಲಿ, ಕಾಡುಕೋಣದ್ದೆ ದ್ರಶ್ಯ. ಕಾಡುಕೋಣ ವೊಂದು ನನ್ನನ್ನು ಅಟ್ಟಿಸಿಕೊಂಡು ಬಂದಂತೆ ಕನಸು. ಅಷ್ಟರಲ್ಲಿ ಯಾರೋ ತಟ್ಟಿ ಎಬ್ಬಿಸಿದರು. ನೋಡಿದರೆ ಬೆಳಕು ನಿಧಾನ ಬರುತ್ತಿತ್ತು.

ಮುಂದಿನ ಭಾಗದಲ್ಲಿ : ಘಟ್ಟದ ಹಾದಿ

Sunday, October 25, 2009

ನಮ್ಮ ಸಾಹಸ ಯಾತ್ರೆ - ಭಾಗ ೫ - ನಮ್ಮ ನಿರ್ಧಾರ




ಈಗೀಗ ನಾನು, ಶರತ್, ರಾಘು ಮುರೂಜನವೂ ಒಟ್ಟಿಗೆ ಸೇರುವುದೇ ಕಷ್ಟವಾಗಿದೆ. ಮೂವರೂ ನಮ್ಮ ನಮ್ಮ ಓದು, ಜೀವನ ಎಂದು ಬೇಟಿಯಾಗುವುದೇ ಅಪರೂಪ. ಹಾಗಿದ್ದಾಗಲೂ ಕಳೆದ ಬಾರಿ ಮೂವರು ಒಂದು ಹದಿನೈದು ದಿನಗಳು ಸೇರುವ ಸಂದರ್ಭ ಒದಗಿತ್ತು.



ದಿನಾ ಮೂವರೂ ಕ್ರಿಕೆಟ್ ಆಡುವುದು, ಬೆಟ್ಟ ಸುತ್ತುವುದು ಮಾಡುತ್ತಿದ್ದೆವು. ನಮ್ಮ ಜೊತೆ ಅರುಣನೂ ಬರುತ್ತಿದ್ದ. ಒಂದು ದಿನ ರಾಘು ನಮ್ಮ ಮನೆಯಲ್ಲಿ ಉಳಿಯುವುದೆಂದು ನಿರ್ಧಾರವಾಯಿತು. ಮೊದಲ್ಲೆಲ್ಲಾ ಆತ ನಮ್ಮ ಮನೆಯಲ್ಲೊಂದಿು ದಿನ ನಾವು ಅವನ ಮನೆಯೋಲ್ಲೊಂದಿಷ್ಟು ದಿನ ಉಳಿಯುತ್ತಿದೆವು. ಅವರ ತೋಟಕ್ಕೆ ಹೋಗಿ ಗೇರು ಹಣ್ಣೋ, ಚಿಕ್ಕು ಹಣ್ಣೋ ತಿನ್ನುತ್ತಾ ಕೂರುತ್ತಿದ್ದೆವು. ಈಗ ಆ ಅಭ್ಯಾಸ ಬಿಟ್ಟು ಹೋಗಿತ್ತು. ಅವತ್ತು ಸಂಜೆ ನಾವು ನಾಲ್ವರೂ ಹತ್ತಿರದ ಗುಡ್ಡಕ್ಕೆ ಹೊರಟೆವು. ಅದು ಇದು ಮಾತನಾಡುತ್ತಾ ಗುಡ್ಡ ಹತ್ತಿದ್ದೇ ಗೊತ್ತಾಗಲ್ಲಿಲ್ಲ. ನಾನು, ರಾಘು ಇಬ್ಬರೂ ಗುಡ್ಡದಲ್ಲಿ ಹಳೆಯ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೆವು. ಶರತ್, ಅರುಣ ಇಬ್ಬರೂ ಇಲ್ಲೇ ಕೆಳಗೆ ನೇರಳೆ ಮರ ಇದೆ. ಆ ಮರದಲ್ಲಿ ಹಣ್ಣಾಗಿದೆಯೆ ಎಂದು ನೋಡಿಕೊಂಡು ಬರುತ್ತೇವೆ ಅಂತ ಹೇಳಿ ಗುಡ್ಡವನ್ನು ಇಳಿಯತೊಡಗಿದರು. ಅದೊಂದು ಸುಂದರವಾದ ಸಂಜೆ. ತಣ್ಣಗೆ ಗಾಳಿ ಬೀಸುತ್ತಿತ್ತು. ಮುಗಿಲ್ಲೆಲ್ಲಾ ಸೂರ್ಯ ಮುಳುಗುತ್ತಿರುವ ಕಾರಣ ಕೆಂಪಾಗಿ ಕಾಣುತ್ತಿತ್ತು. ಸೂರ್ಯ ದೂರದ ಘಟ್ಟದ ಹಿಂದೆ ಜಾರುತ್ತಿದ್ದ. ನಾನು ನಮ್ಮ ಬಾಲ್ಯದ ನೆನಪುಗಳನ್ನು ಕೆದಕಿ ರಾಘುಗೆ ಹೇಳುತ್ತಿದ್ದೆ. ಆತನೂ ಆ ಕಾಲ ಮತ್ತೆ ಬಾರದೆಂದು ಕೊರಗುತ್ತಿದ್ದ. ಕೆಪ್ಪ ಸತ್ತು ಆಗಲೇ ಮೂರು ವರ್ಷಗಳಾಗಿತ್ತು. ಆತ ದೂರದಲ್ಲಿ ಕಾಣುವ ಘಟ್ಟದ ಬಗ್ಗೆ ಹೇಳಿದ ಕತೆ ನೆನಪಿಸಿದೆ.

Saturday, October 24, 2009

ನಮ್ಮ ಸಾಹಸ ಯಾತ್ರೆ - ಹಕ್ಕಿ ಮರಿಯೊಡನೆ ಒಂದು ದಿನ - ಭಾಗ ೪

ಹಾಕಿಯನ್ನು ಮನೆಗೆ ತೆಗೆದುಕೊಂಡು ಹೋದೆವು. ಒಂದು ರಟ್ಟಿನ ಪೆಟ್ಟಿಗೆಯ ತುಂಬ ಚಿಂದಿ ಬಟ್ಟೆಗಳನ್ನು ಹಾಸಿ ಅದರಲ್ಲಿ ಹಕ್ಕಿ ಮರಿಯನ್ನು ಮಲಗಿಸಿದೆವು. ನಾವು ನಂತರ ಮೈ ಕೈ ಒರೆಸಿಕೊಂಡು ಬಟ್ಟೆ ಬದಲಿಸಿದೆವು. ಆಗ ನಮ್ಮ ಅಜ್ಜಿ ಟವೆಲ್ ಗಳನ್ನು ಮೀನು ಹಿಡಿಯಲು ತೆಗೆದುಕೊಂಡು ಹೋಗಬೇಡಿರೆಂದು, ಅದು ಗಬ್ಬು ವಾಸನೆ ಹಿಡಿದು ನಿರುಪಯುಕ್ತವಾಗುತ್ತದೆಂದು ಬೈಯುತ್ತಿದ್ದರು. ನಾವ್ಯಾರೂ ಅವಳ ಮಾತು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಸ್ನಾನದ ಶಾಸ್ತ್ರ ಮಾಡಿಕೊಂಡು ಬೆಟ್ಟದ ಕಡೆ ಓಡಿದೆವುಅಲ್ಲಿ ಎಷ್ಟು ಹುಡುಕಿದರೂ ಹಕ್ಕಿಯ ಗೂಡು ಕಂಡು ಬರಲ್ಲಿಲ್ಲ. ಕೊನೆಗೆ ಹಕ್ಕಿಯನ್ನು ನಾವೇ ಸಾಕೋಣ ಎಂದು ನಿರ್ಧರಿಸಿ ಮನೆಗೆ ಬಂದಾಗ ಹಕ್ಕಿ ಮರಿ ಬೆಪ್ಪಾಗಿ ಕುಳಿತ್ತಿತ್ತು. ಅದಕ್ಕೆ ಬಹುಷಃ ಆಹಾರ ಬೇಕಾಗಿರಬಹುದು ಎಂದುಕೊಂಡು ಯಾವ ಆಹಾರ ತಿನ್ನಿಸಬೇಕೆಂದು ಯೋಚಿಸಿದೆವು. ಅದು ಯಾವ ಜಾತಿ ಹಕ್ಕಿ ಎಂದು ತಿಳಿದಿರಲ್ಲಿಲ್ಲ. ಒಮ್ಮೆ ಬಾಳೆಹಣ್ಣು ತಿನ್ನಿಸಲು ಹೋಗಿ ಹಕ್ಕಿ ಉಸಿರು ಕಟ್ಟಿ ಸತ್ತಿದ್ದನ್ನು ನಾನು ತೇಜಸ್ವಿಯವರ ಪುಸ್ತಕದಲ್ಲಿ ಓದಿದ್ದೆ. ಕೊನೆಗೆ ಏನೂ ಹೊಳೆಯದೆ ಅದನ್ನು ಬಿಟ್ಟು ಬಿಡಬೇಕೆಂದು ಅಂದುಕೊಂಡೆವು. ಆದರೆ ನೆಲದ ಮೇಲೆ ಬಿಟ್ಟು ಬಂದರೆ ಯಾವುದಾದರು ನಾಯಿ, ಬೆಕ್ಕಿನ ಆಹಾರ ಆಗುವ ಸಾದ್ಯತೆ ಇತ್ತು. ಅದ್ದರಿಂದ ಶರತ್ ಒಂದು ಗೂಡು ತಂದ. ಆ ಗೂಡು ನಮಗೆ ಒಂದು ಬೇಸಿಗೆಯಲ್ಲಿ ಸಿಕ್ಕಿತ್ತು. ನೇರಳೆ ಮರಕ್ಕಾಗಿ ಅಲೆಯುತ್ತಿದ್ದಾಗ ಒಂದು ಮರದ ಮೇಲೆ ಈ ಗೂಡಿತ್ತು. ಆ ಗೂಡಿನಲ್ಲಿ ಮೂರು ಮೊಟ್ಟೆಗಳಿದ್ದವು. ಅದನ್ನು ಗೂಡಿನ ಸಮೇತ ತಂದು ನಾವೇ ಶಾಖ ಕೊಟ್ಟು ಮರಿ ಮಾಡಲು ಹೊಂಚು ಹಾಕಿದ್ದೆವು. ಅದು ಪಲಕಾರಿಯಾಗದೆ ಹಾಗೇ ಹೀಗೆ ಒಂದು ಮೊಟ್ಟೆ ಒಡೆದು ಹೋಯಿತು. ಇನ್ನೆರಡನ್ನು ನಾವೇ ಎಸೆದೆವು. ಆ ಗೂಡು ಈಗ ಹೇಗೆ ಉಪಕಾರಕ್ಕೆ ಬರುತ್ತದೆ ಎಂದು ತಿಳಿಯಲ್ಲಿಲ್ಲ. ಶರತ್ ಆ ಹಕ್ಕಿ ಮರಿಯನ್ನು ಗೂಡೊಳಗೆ ಕೂರಿಸಿ ಹಿತ್ತಲಿನ ಸಪೋಟ ಮರದ ಮೇಲೆ ಇಡಬೇಕೆಂದು ಅದು ತಾನಾಗಿ ಹಾರಿ ಹೋಗುತ್ತದೆ ಎಂದು ಹೇಳಿದ. ನನಗೂ ಸರಿ ಎನ್ನಿಸಿತು. ಕೊನೆಗೆ ಹಾಗೇ ಮಾಡಿದೆವು. ಆದರೆ ಮಧ್ಯಾಹ್ನ ವಾದರೂ ಅದು ಹಾರಿ ಹೋಗದ್ದನ್ನು ಕಂಡು ನನಗೆ ಗಾಭರಿಯಾಯಿತು. ನಮ್ಮ ಅಜ್ಜ ಅದು ಆಹಾರವಿಲ್ಲದೆ ಸಾಯುತ್ತದೆಂದು ಆದ್ದರಿಂದ ಎರೆ ಹುಳುವನ್ನಾದರೂ ಕೊಡಿ ತಿನ್ನುತ್ತದೇನೋ ಎಂದರು. ನಾನು ತಕ್ಷಣ ತೋಟಕ್ಕೆ ಓಡಿದೆ. ಅಲ್ಲಿ ಒಂದು ಟ್ಯಾಂಕಿನಲ್ಲಿ ಅಜ್ಜ ಗೊಬ್ಬರಕ್ಕಾಗಿ ಎರೆ ಹುಳು ಸಾಕಿದ್ದರು. ಒಂದೆರಡು ಎರೆ ಹುಳುವನ್ನೇನೋ ತಂದೆ ಆದರೆ ಅದನ್ನು ಹಕ್ಕಿ ಮರಿ ಹೇಗೆ ತಿನ್ನುತ್ತದೆ ಎಂದು ತಿಳಿಯಲ್ಲಿಲ್ಲ. ಆಗ ಅರುಣನ ಹತ್ತಿರ ಚಿಮುಟಿಗೆ ಇರುವುದು ಗಮನಕ್ಕೆ ಬಂತು. ತಕ್ಷಣ ಆತನನ್ನು ಓಡಿಸಿದೆ. ಆತ ತಂದ ಮೇಲೆ ಎರೆ ಹುಳುವನ್ನ ತಿನ್ನಿಸಿದೆ. ಕೊನೆಗೆ ಹಕ್ಕಿ ಮರಿಯನ್ನು ಹಾಗೇ ಮರದ ಮೇಲೆ ಬಿಟ್ಟು ಬಂದೆವು.

ಸಂಜೆ ನಾವು ಕ್ರಿಕೆಟ್ ಆಡಲು ಹೊರಟುಹೋದೆವು. ಆಗ ನಮ್ಮ ಅಜ್ಜ ಪಂಪ್ ಸೆಟ್ ಆನ್ ಮಾಡಲು ಹಿತ್ತಲಿಗೆ ಹೋಗಿದ್ದರಂತೆ. ತಾಯಿ ಹಕ್ಕಿ ಬಂದು ಕೂಗುತ್ತಿತ್ತಂತೆ. ಇದೂ ಕೂಗುತ್ತಿತ್ತಂತೆ. ನಾವು ಬಂದ ಮೇಲೆ ಅಜ್ಜ ಇವಿಷ್ಟನ್ನು ಹೇಳಿದರು. ತಕ್ಷಣ ನಾವು ಹಿತ್ತಿಲಿಗೆ ಹೋದೆವು. ಅಲ್ಲಿ ನೋಡಿದರೆ ಹಕ್ಕಿ ಮರಿ ಇರಲ್ಲಿಲ್ಲ. ನಮಗೆ ತುಂಬ ಬೇಜಾರಾಯಿತು. ಆದರೆ ಹಕ್ಕಿ ಸಾಕುವ ಕಷ್ಟವೂ ಅರಿವಿಗೆ ಬಂತು.

ಮುಂದಿನ ಭಾಗದಲ್ಲಿ - ನಮ್ಮ ನಿರ್ಧಾರ.
********************************************************************************
ವ್ಯಾಕರಣದಲ್ಲಿನ ದೋಷಕ್ಕಾಗಿ ಕ್ಷಮೆ ಇರಲಿ.

Friday, October 23, 2009

ನಮ್ಮ ಸಾಹಸ ಯಾತ್ರೆ - ಹಕ್ಕಿ ಮರಿಯೊಡನೆ ಒಂದು ದಿನ - ಭಾಗ ೩




ನಮ್ಮ ಅಜ್ಜನ ಮನೆಯ ಹಿಂದೆ ತೋಟಕ್ಕೆ ತಾಗಿಕೊಂಡು ಒಂದು ಜಲಪಾತ ಇದೆ. ಅದು ಚಿಕ್ಕ ಜಲಪಾತ. ಬೇಸಿಗೆಯಲ್ಲಿ ಒಣಗಿಕೊಂಡು ಇರುತ್ತಿತ್ತು. ಆದರೆ ಮಳೆಗಾಲದಲ್ಲಿ ಮಾತ್ರ ರೌದ್ರವತಾರ ತಾಳಿ ಕೆಂಪು ನೀರು ಭರ್ರ್ ಎಂದು ಬೀಳುತ್ತಿತ್ತು. ಹೀಗೆ ನೀರು ಬಿದ್ದು ಬಿದ್ದು ಒಂದು ಹೊಂಡವೇ ಉಂಟಾಗಿತ್ತು. ಬೇಸಿಗೆಯಲ್ಲಿ ನಾನು, ಶರತ್ ಮನೆಯಿಂದ ಒಂದು ಟವೆಲ್, ಬಾಟಲಿ ಹಾರಿಸಿಕೊಂಡು ಬಂದು ಮೀನು ಹಿಡಿಯುತ್ತಿದ್ದೆವು. ಹೊಂಡದಲ್ಲಿ ದೊಡ್ಡ ದೊಡ್ಡ ಮೀನುಗಳಿದ್ದರೂ ನಮಗೆ ಸಿಗುತ್ತಿದ್ದಿದ್ದು ಪುಡಿ ಮೀನುಗಳೇ. ಅದನ್ನು ಬಾಟಲಿಗೆ ತುಂಬಿ ಸಂತೋಷ ಪಡುತ್ತಿದ್ದೆವು. ಅವೇನು ಎರಡು ದಿನಕ್ಕಿಂತ ಜಾಸ್ತಿ ಬಾಟಲಿಯಲ್ಲಿ ಬದುಕುತ್ತಿರಲ್ಲಿಲ್ಲ.


ಜಲಪಾತದ ಇತ್ತೀಚಿಗಿನ ಫೋಟೋ, ಶರತ್ ತೆಗೆದಿದ್ದು.


ಒಂದು ದಿನ ಹೀಗೆ ಮೀನು ಹಿಡಿದು ಸುಸ್ತಾಗಿ ಹಾಗೆ ನೀರಿನಲ್ಲಿ ಬಿದ್ದುಕೊಂಡಿದ್ದೆವು. ಆಗ ಅರುಣ ಜಲಪಾತದ ಮೇಲಿನಿಂದ ಕೂಗುತ್ತಿರುವುದು ಕೇಳಿಸಿತು. ನಾವು ಎನೆದು ಕೇಳಿದೆವು. ಆತ ಬೇಗ ಬನ್ನಿ, ತಾನೊಂದು ಹಕ್ಕಿ ಮರಿ ಹಾರಲಾಗದೆ ಇದ್ದುದನ್ನು ನೋಡಿದೆ ಎಂದ. ಆತ ಕೂದಲು ಕಟ್ ಮಾಡಿಸಿಕೊಂಡು ಬರಲು ಹೋಗಿದ್ದನಂತೆ. ಬರುವಾಗ ದಾರಿಯ ಬದಿ ಬೆಟ್ಟದಲ್ಲಿ ಇದನ್ನು ಕಂಡನಂತೆ. ಇವಿಷ್ಟನ್ನೂ ಆತ ಒಂದೇ ಉಸುರಿಗೆ ಹೇಳಿದ. ನಾನು, ಶರತ್ ಹಾಗೆ ಆಶ್ಚರ್ಯದಿಂದ ಒಂದೇ ಕ್ಷಣದಲ್ಲಿ ಬೆಟ್ಟಕ್ಕೆ ಓಡಿದೆವು. ಅಲ್ಲಿ ನೋಡಿದರೆ ಎಲ್ಲೂ ಹಕ್ಕಿ ಕಾಣಲ್ಲಿಲ್ಲಅರುಣ ಬೆಟ್ಟು ಮಾಡಿ ತೋರಿಸಿದ, ಆದರೂ ಗುರುತಿಸಲಾಗಲ್ಲಿಲ್ಲ. ಅದು ತರಗೆಲೆಗಳ ಮದ್ಯೆ ಲೀನವಾಗಿತ್ತು. ಸ್ವಲ್ಪ ಹೊತ್ತಿನ ನಂತರ ಅದು ಹೆದರಿತು ಅಂತ ಅನ್ನಿಸುತ್ತೆ, ಓಡಲು ಶುರು ಮಾಡಿತು. ಆಗ ಅದನ್ನು ಕಂಡೆ. ಶರತ್ ಅದನ್ನು ಹಿಡಿಯಲು ಓಡಿದ. ಅದು ಕಾಲು ದಾರಿಯೊಂದನ್ನು ದಾಟಿ ಜಲಪಾತದ ಬುಡಕ್ಕೆ ಬಂತು. ನಾವು ಹೇಗೂ ಹಾರಲು ಬರುವುದಿಲ್ಲ ಈಗ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಎಣಿಸುತ್ತಿದ್ದಂತೆ ತೇಲಿಕೊಂಡು ಜಲಪಾತದ ಪಕ್ಕದಲ್ಲಿರುವ ತೋಟಕ್ಕೆ ಇಳಿಯಿತು. ಶರತ್, ಅರುಣ ಅದನ್ನು ಹಿಂಬಾಲಿಸಿಕೊಂಡು ತೋಟಕ್ಕೆ ಇಳಿದರು. ಅವರು ಇಳಿಯುವ ವೇಗ ಕಂಡು ಎಲ್ಲಿ ಇಬ್ಬರು ಬಿದ್ದು ಹಲ್ಲು ಮುರಿದುಕೊಲ್ಲುತ್ತಾರೋ ಎಂದುಕೊಂಡೆ. ಅಷ್ಟರಲ್ಲಿ ಅದು ತೋಟದ ಕಾಪಿ ಗಿಡದ ಬಳಿ ಇಳಿಯಿತು. ನಾನು ಅಲ್ಲಿಗೆ ಓಡಿದೆ, ಆದರೆ ಅದೆಲ್ಲಿ ಕುಟುಕಿಬಿಡುತ್ತದೋ ಎಂದು ಹೆದರಿ ಅದನ್ನು ಹಿಡಿಯಲ್ಲಿಲ್ಲ. ಕೊನೆಗೆ ಶರತ ನೇಅದನ್ನು ಹಿಡಿದ.

ಮುಂದಿನ ಭಾಗದಲ್ಲಿ - ಹಕ್ಕಿ ಏನಾಯ್ತು?

Thursday, October 22, 2009

ನಮ್ಮ ಸಾಹಸ ಯಾತ್ರೆ - ಮುದುಕನ ಕತೆ - ಭಾಗ - ೨

ನಮ್ಮ ಮನೆಗೆ ಆಗ ಒಬ್ಬ ಮುದುಕ ಕೆಲಸಕ್ಕೆ ಬರುತ್ತಿದ್ದ. ಆತನ ಹೆಸರು ಕೆಪ್ಪ ಎಂದು. ಆತ ಕಿವುದನೆನಲ್ಲ. ಆದರೂ ಆ ಹೆಸರೇಕೆ ಬಂತೋ ಗೊತ್ತಿಲ್ಲ. ಆತ ಯುವಕನಾಗಿದ್ದಾಗ ಈಗಿನ ನಾಲ್ಕು ಆಳುಗಳು ಮಾಡುವಷ್ಟು ಕೆಲಸವನ್ನು ಒಬ್ಬನೇ ಮಾಡುತ್ತಿದ್ದನಂತೆ. ಈಗ ವಯಸ್ಸಾಗಿದ್ದರಿಂದ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದ. ಆತನ ಬಾಯಲ್ಲಿ ರೋಚಕ ಕತೆಗಳನ್ನು ಕೇಳುವುದೆಂದರೆ ಮರೆಯಲಾಗದ ಅನುಭವ. ಮಲೆನಾಡಿನಲ್ಲಂತೂ ಮೂರು ಹೊತ್ತೂ ಬಚ್ಚಲ ಬೆಂಕಿ ಉರಿಯುತ್ತಿರುತ್ತದೆ. ಆ ಬೆಂಕಿಯ ಎದುರು ಕೂತು ಗೇರು ಬೀಜವನ್ನೋ, ಹಲಸಿನ ಬೀಜವನ್ನೋ ಸುತ್ತು ತಿನ್ನುತ್ತಾ ಕೆಪ್ಪನ ಕತೆ ಕೆಳುತ್ತಿದೆವು. ಆತ ಮುಖ್ಯವಾಗಿ ನಮ್ಮನ್ನು ರಂಜಿಸಲು ಭೂತ, ದೆವ್ವದ, ಕಾಡು ಪ್ರಾಣಿಗಳ ಕತೆ ಹೇಳುತ್ತಿದ್ದ. ನಮ್ಮ ಅಜ್ಜನ ತೋಟಕ್ಕೆ ತಾಗಿಕೊಂಡೇ ನಮ್ಮ ಚಿಕ್ಕ ಅಜ್ಜನ ತೋಟ ಇದೆ. ಅದರ ಹಿಂದೆ ಭೂತನ ಕಲ್ಲು ಇದೆ. ಅದಕ್ಕೆ ಕೋಣನ ತಲೆಯ ಭೂತ ಎಂದು ಹೆಸರು. ಕೆಪ್ಪ ಒಮ್ಮೆ ಅದೇ ದಾರಿಯಲ್ಲಿ ರಾತ್ರಿ ಬರುವ ಪ್ರಸಂಗ ಬಂದಿತ್ತಂತೆ. ಆಗ ಅಜ್ಜನ ತೋಟದಲ್ಲಿ ಕೋಣವೊಂದು ತಿರುಗಾಡುತ್ತಿದ್ದಂತೆ ಕಂಡು ಬಂತಂತೆ. ಅದನ್ನು ನೋಡಿ ಕೆಪ್ಪ ಯಾರದ್ದೋ ಕೋಣ ತಪ್ಪಿಸಿಕೊಂಡು ಬಂದಿದೆ ಎಂದುಕೊಂಡು ಹೂಶ್, ಹೂಶ್ ಎಂದನಂತೆ. ಅದು ಒಮ್ಮೆ ಹುಲಿಯಂತೆ ಘರ್ಜಿಸಿದಾಗ ಕೆಪ್ಪನ ಮೈ ಕೈ ಅದುರಲು ಶುರುವಾಯಿತಂತೆ. ಆಗ ಆಟ ಅಲ್ಲಿಂದ ಓಡಲು ಶುರು ಮಾಡಿದವನು ಮನೆಯ ತನಕ ನಿಲ್ಲಲ್ಲಿಲ್ಲವಂತೆ. ಹೀಗೆ ಅನೇಕ ಕತೆಗಳನ್ನು ಹೇಳುತ್ತಿದ್ದ. ಇನ್ನೊಂದು ಕತೆ ಹೀಗಿದೆ. ಒಮ್ಮೆ ಭಯಂಕರ ಮಳೆ ಬಂತಂತೆ. ಮಳೆ ನಿಂತ ನಂತರ ಕೆಪ್ಪ ತೋಟಕ್ಕೆ ಹೋಗಿದ್ದನಂತೆ. ಅಲ್ಲಿ ಹಲಸಿನ ಮರದ ಒಂದು ಕೊಂಬೆ ಮುರಿದು ಬಿದ್ದಿತ್ತಂತೆ. ಆ ಕೊಂಬೆಯಲ್ಲಿ ಮೂರು ಹಕ್ಕಿ ಮರಿಗಳು ಗೂಡಿನಲ್ಲಿ ಇದ್ದವಂತೆ. ಅದು ಯಾವ ಹಕ್ಕಿ ಮಾರಿಯೋ ಕೆಪ್ಪನಿಗೆ ತಿಳಿಯಲ್ಲಿಲ್ಲ. ಆಟ ಅವುಗಳನ್ನು ಮನೆಗೆ ತಂದು ಉಪಚರಿಸಿದನಂತೆ. ಮೂರು ಹಕ್ಕಿಗಳಲ್ಲಿ ಒಂದು ಮಾತ್ರ ಬದುಕಿತಂತೆ. ಅದು ಹೇಗೋ ಹಾರಲು ಕಲಿತು ಕಾಡಿಗೆ ಹಾರಿ ಹೋಯಿತಂತೆ. ಈಗ ಆ ಜಾತಿಯ ಯಾವುದೇ ಹಕ್ಕಿ ಕಂಡರೂ ಕೆಪ್ಪ ತಾನು ಸಾಕಿದ್ದು ಎಂದು ಹೇಳುತ್ತಾನೆ.



ಇನ್ನೊಂದು ಭಾರಿ ಹಳೆ ಕತೆ. ಆಗ ಹುಲಿ, ಚಿರತೆ ಕಾಡುಗಳಲ್ಲಿ ಧಾರಾಳವಾಗಿ ಇದ್ದುವಂತೆ. ಒಮ್ಮೆ ಚಿರತೆಯೊಂದು ಇವನ ನಾಯಿ ಕದಿಯಲು ಬಂದಿತ್ತಂತೆ. ನಾಯಿ ಹೆದರಿ ಬೊಗಳಲು ಶುರು ಮಾದಿತ್ತಂತೆ . ಕೆಪ್ಪ ಹೊರಗೆ ಬಂದು ನೋಡಿದರೆ ಚಿರತೆ ! ಈತ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಕತ್ತಿಯನ್ನು ಹಿರಿದು ಚಿರತೆಯೋದನೆ ಹೋರಾಡಲು ಅನಿಯಾದನಂತೆ. ಕೊನೆಗೆ ಚಿರತೆಯೇ ಓಡಿ ಹೋಯಿತಂತೆ. ಇದಾದ ಎರಡು ದಿನದ ನಂತರ ಒಮ್ಮೆ ಇವನ ನಾಯಿ ಮಂಗಗಳನ್ನು ಅಟ್ಟಿಸಿಕೊಂಡು ಕಾಡಿಗೆ taಹೋಗಿತ್ತಂತೆ. ಆಗ ಅದನ್ನು ಹಿಡಿದು ತಿಂದು ಮುಗಿಸಿತ್ತಂತೆ.



ಆತ ಹೇಳುವ ಕತೆ ಎಷ್ಟು ನಿಜವೋ, ಸುಳ್ಳೂ ತಿಳಿಯುತ್ತಿರಲ್ಲಿಲ್ಲ . ಆದರೂ ಆತ ಕತೆ ಹೇಳುವ ಶೈಲಿ ನಮ್ಮನ್ನು ರಂಜಿಸುತ್ತಿತ್ತು. ಒಂದು ಬಾರಿ ರಜಕ್ಕೆ ಹೋದಾಗ ನಾವು ಹಕ್ಕಿ ಮರಿಯ ಕತೆ ಕೇಳಿ ನಮಗೊಂದು ಹಕ್ಕಿ ತಂದುಕೊಡು ಸಾಕುತ್ತೇವೆ ಎಂದು ಹೇಳಿದೆವು. ಆತ ಕೊನೆಗೂ ತಂದು ಕೊಡಲ್ಲಿಲ್ಲ . ಆದರೆ ಹಕ್ಕಿ ಸಾಕುವುದು ಎಷ್ಟು ಕಷ್ಟ ಎಂದು ಒಂದು ಘಟನೆಯಿಂದ ತಿಳಿಯಿತು.



ಮುಂದಿನ ಭಾಗದಲ್ಲಿ : ಹಕ್ಕಿ ಮರಿಯೊಡನೆ ಒಂದು ದಿನ.

ನಮ್ಮ ಸಾಹಸ ಯಾತ್ರೆ - ಮುದುಕನ ಕತೆ - ಭಾಗ ೧


ನನ್ನ ಅಜ್ಜನ ಮನೆ ಬೆಟ್ಟ, ಕಣಿವೆಗಳ ಮದ್ಯೆ ಇದೆ. ಸುತ್ತ ಮುತ್ತ ಸುಂದರ ಪರಿಸರ. ಮಳೆಗಾಲದಲ್ಲಂತೂ ಎಲ್ಲೆಲ್ಲೂ ಹಸಿರು ತುಂಬಿಕೊಂಡಿರುತ್ತದೆ. ನಾನು, ನನ್ನ ತಮ್ಮ ಇಬ್ಬರೂ ರಜೆ ಬಂತೆಂದರೆ ಅಜ್ಜನ ಮನೆಯಲ್ಲೇ ಇರುತ್ತೇವೆ. ನಮ್ಮಿಬ್ಬರಿಗೂ ಹೇಗೋ ಪರಿಸರದ ಮೇಲೆ ಪ್ರೀತಿ ಬೆಳೆದಿತ್ತು. ಕಾಡು, ಬೆಟ್ಟ ನಿಗೂದತೆಯ ಹಾಗೆ ಅನ್ನಿಸುತ್ತಿತ್ತು. ಪ್ರತಿಯೊಂದು ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕುತೂಹಲ. ಈ ರೀತಿಯ ಹುಚ್ಚನ್ನು ಹತ್ತಿಸಿಕೊಂದವರಲ್ಲಿ ನನ್ನ ಆಪ್ತ ಸ್ನೇಹಿತ ರಾಘು ಕೂಡ ಒಬ್ಬ. ನಾವು ಮೂವರು ಎಲ್ಲಾದರೂ ಸುತ್ತುತ್ತಿರುತ್ತೇವೆ. ಈಗೀಗ ನಮ್ಮ ಜೊತೆ ಅರುಣ ಕೂಡ ಬರುತ್ತಾನೆ.

ನನ್ನ ಅಜ್ಜ ಒಬ್ಬ ಕೃಷಿಕರು. ಮಲೆನಾಡಿನಲ್ಲಿ ಆಗ ಕೃಷಿ ಮಾಡಲು ಅನೇಕ ಉಪಟಳ ಇರುತ್ತಿತ್ತು. ಬೆಳೆದ್ದಿದ್ದರಲ್ಲಿ ಅರ್ದ ಭಾಗ ಮಂಗ, ಹಂದಿ ತಿಂದುಕೊಂಡು ಹೋಗುತ್ತಿದವು. ಇನ್ನು ಕಾಡುಕೋಳಿ ಇತ್ದ್ಯಾದಿ ಪಕ್ಷಿಗಳು ಸಹಿತ ತೊಂದರೆ ಕೊಡುತ್ತಿದವು. ಇವುಗಳನ್ನು ಹೊಡೆಯಲು ಅಜ್ಜ ಒಂದು ಕೇಪಿನ ಕೋವಿ ಇಟ್ಟುಕೊಂಡಿದ್ದರು. ನಾವು ಬ್ರಾಹ್ಮಣ ರಾದ್ದರಿಂದ ಮಾಂಸ ತಿನ್ನುತಿರಲ್ಲಿಲ್ಲ. ಅಜ್ಜ ಹೊಡೆದ ಮಂಗನನ್ನೋ, ಕಾಡುಕೊಳಿಯನ್ನೋ ಹೊತ್ತೊಯಲು ಒಬ್ಬ ಇರುತ್ತಿದ್ದ. ಅಜ್ಜ ತುಂಬ ಕಷ್ಟ ಸಹಿುಗಳಗಿದ್ದರು ಆಗಿನ ಕಾಲದಲ್ಲಿ ಈಗಿನಂತೆ ಪಂಪ್ ಸೆಟ್ ಇತ್ಯಾದಿ ಇರುತ್ತಿರಲ್ಲಿಲ್ಲ. ಆಗ ಕಾಲುವೆಯಿಂದ ನೀರು ಹೊತ್ತು ತೋಟಕ್ಕೆ ಹೊತ್ತೊಯುತ್ತಿದ್ದುದನ್ನು ನಾನೇ ಸ್ವತಃ ಕಂಡಿದ್ದೇನೆ. ನಮಗೆ ಪರಿಸರದ ಮೇಲೆ ಆಸಕ್ತಿ ಮೂಡುವಲ್ಲಿ ಅಜ್ಜನೇ ಮುಖ್ಯ ಕಾರಣ.

ನಮ್ಮ ಸಾಹಸ ಯಾತ್ರೆ - ಹಿನ್ನೆಲೆ

ಹಿನ್ನೆಲೆ:
ಇದು ನಾನು ಕಾಲೇಜ್ ನಲ್ಲಿರುವಾಗ ಬರೆದ ಕತೆ. ಆಗ ಕತೆ ಬರಿಯೋ ಹುಚ್ಚು. ಕತೆ ಬರಿಯೋವಾಗ ಕತೆಯ ಸಂದರ್ಭಕ್ಕೆ ತಕ್ಕಂತೆ ಚಿತ್ರ ಬರೆದಿದ್ದೆ. ಅದನ್ನು ಸಹ ಬ್ಲಾಗ್ ನಲ್ಲಿ ಹಾಕುತ್ತೇನೆ. ಕತೆ ಮೆಚ್ಚಿದರೆ ಖಂಡಿತ ತಿಳಿಸಿ. ಮುಖ್ಯವಾಗಿ ನಾನು ಪ್ರೀತಿಸುವ ಮಲೆನಾಡಿನ ಪರಿಸರ ಈ ಕತೆಯಲ್ಲಿ ಮೂಡಿ ಬಂದಿದೆ.