Monday, October 26, 2009

ನಮ್ಮ ಸಾಹಸ ಯಾತ್ರೆ - ಭಾಗ - ೬ - ನಮ್ಮ ನಿರ್ಧಾರ

ಅಷ್ಟರಲ್ಲಿ ಶರತ್, ಅರುಣ ಒಂದು ಪ್ಲಾಸ್ಟಿಕ್ ಕವರ್ ತುಂಬ ನೇರಳೆ ಹಣ್ಣು ತುಂಬಿಕೊಂಡು ಬಂದಿದ್ದರು. ಅವರೂ ಹಣ್ಣು ತಿನ್ನುತ್ತಾ ಅವನ ಕತೆಗಳನ್ನು ಮೆಲುಕು ಹಾಕತೊಡಗಿದರು. ಘಟ್ಟದಲ್ಲಿ ಈಗಲೂ ಹುಲಿ, ಕಾಡುಕೋಣಗಳು ಇವೆಯಂತೆ. ಆ ನದಿಯ ದಡದಲ್ಲೆಲ್ಲೋ ಒಂದೆರಡು ಕುಟುಂಬಗಳು ವಾಸವಾಗಿವೆಯಂತೆ. ಆ ನದಿಯ ಮದ್ಯೆ ಒಂದು ದ್ವೀಪ ಇದ್ದು ಅಲ್ಲಿ ವಾಸಿಸುತ್ತಿದ್ದ ಮುರಿದ ಮನೆ ಇತ್ಯಾದಿ ಇವೆ ಎಂದು ಹೇಳಿದ್ದ. ಆ ನದಿಯಲ್ಲಿ ಭಯಂಕರ ಮೊಸಳೆಗಳಿವೆ ಎಂದೂ ದ್ವೀಪದಲ್ಲೀಗ ಭೂತಗಳು ಸೇರಿಕೊಂಡಿವೆ ಎಂದೂ ಹೆದರಿಸಿದ್ದ. ಅವನ ವಿವರಣೆಗಳನ್ನೆಲ್ಲ ಕೇಳಿ ನಮಗೆ ಅಲ್ಲಿಗೆ ಹೋಗಿ ಬರಬೇಕು ಎಂದೇನೂ ಅನ್ನಿಸುತ್ತಿತ್ತು. ಆದರೆ ಅದು ಈ ವರೆಗೆ ಸಾದ್ಯವಾಗಿರಲ್ಲಿಲ್ಲ. ಈಗ ಹೇಗೋ ೮-೧೦ ದಿನ ರಜೆ ಉಳಿದಿರುವುದರಿಂದ ಅಲ್ಲಿಗೆ ಹೋಗಿ ಬರೋಣ ಅಂದು ನಿರ್ಧರಿಸಿದೆವು. ಅರುಣ ತಾನು ಬರುತ್ತೇನೆ ಎಂದು ಹಠ ಹಿಡಿದ. ನಮಗೆ ಅವನನ್ನು ಕರೆದುಕೊಂಡು ಹೋಗುವುದೇನು ಸಮಸ್ಯೆಯಾಗಿರಲ್ಲಿಲ್ಲ. ಆದರೆ ಅವನ ಮನೆಯವರನ್ನು ಒಪ್ಪಿಸುವುದೇ ಸಮಸ್ಯೆಯಾಗಿತ್ತು. ರಾಘು ಮರುದಿನ ನಮ್ಮ ಮನೆಯಲ್ಲೇ ಉಳಿದುಕೊಳ್ಳುವುದು, ಕೊನೆಗೆ ಒಟ್ಟಿಗೆ ಎಲ್ಲರೂ ಮುಂಜಾನೆ ಎದ್ದು ಹೊರಡುವುದು ಎಂದು ನಿರ್ಧಾರವಾಯಿತು.

ನಮ್ಮ ಮನೆಯಲ್ಲಿ ಅಜ್ಜ ಒಪ್ಪಿಕೊಂಡರೂ ಅಜ್ಜಿಯನ್ನು ಒಪ್ಪಿಸುವುದು ಸ್ವಲ್ಪ ಕಷ್ಟ ವಾಯಿತು. ಅರುನನಂತೂ ಒಂದು ದಿನವಿಡೀ ಅಳುತ್ತ, ಊಟ ಬಿಟ್ಟು ಹೆದರಿಸಿ ಮನೆಯಲ್ಲಿ ಒಪ್ಪಿಸಿದ್ದ. ರಾಘು ಸಂಜೆ ತನ್ನ ಗಂಟು, ಮೂಟೆ ಹೊತ್ತುಕೊಂಡು ನಮ್ಮ ಮನೆಗೆ ಬಂದ. ರಾಘುವಿನ ಅತ್ತೆ ಕುಟ್ಟವಲಕ್ಕಿ ಮಾಡಿ ಕೊಟ್ಟಿದ್ದರು. ಏಳೆಂಟು ಎಲೆ ಸವತೆ ಕಾಯಿ ತಂದಿದ್ದ. ನಮ್ಮ ಮನೆಯಲ್ಲಿ ಅಜ್ಜಿ ಚಪಾತಿ ತಯಾರಿಸಿ ಇಟ್ಟಿದ್ದರು. ಅರುಣ ತಾನು ಘಟ್ಟಕ್ಕೆ ಹೊರಡುವ ಸುದ್ದಿಯನ್ನು ಊರ ತುಂಬ ತಮಟೆ ಹೊಡೆದುಕೊಂಡು ಬಂದಿದ್ದ. ರಾತ್ರಿ ಕನಸಲ್ಲಂತೂ ನಮಗೆ ಹುಲಿ, ಕಾಡುಕೋಣದ್ದೆ ದ್ರಶ್ಯ. ಕಾಡುಕೋಣ ವೊಂದು ನನ್ನನ್ನು ಅಟ್ಟಿಸಿಕೊಂಡು ಬಂದಂತೆ ಕನಸು. ಅಷ್ಟರಲ್ಲಿ ಯಾರೋ ತಟ್ಟಿ ಎಬ್ಬಿಸಿದರು. ನೋಡಿದರೆ ಬೆಳಕು ನಿಧಾನ ಬರುತ್ತಿತ್ತು.

ಮುಂದಿನ ಭಾಗದಲ್ಲಿ : ಘಟ್ಟದ ಹಾದಿ

2 comments:

  1. ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ,
    ತುಂಬಾ ಸುಂದರ ವಿವರಣೆ,
    ಕಾಯಿಸಬೇಡಿ

    ReplyDelete
  2. ಥ್ಯಾಂಕ್ಸ್ ... ನಮ್ಮ ಸಾಹಸ ಯಾತ್ರೆ ನಿಮಗೂ ಹಿಡಿಸಿದ್ದಕ್ಕೆ.:)

    ReplyDelete