Saturday, October 24, 2009

ನಮ್ಮ ಸಾಹಸ ಯಾತ್ರೆ - ಹಕ್ಕಿ ಮರಿಯೊಡನೆ ಒಂದು ದಿನ - ಭಾಗ ೪

ಹಾಕಿಯನ್ನು ಮನೆಗೆ ತೆಗೆದುಕೊಂಡು ಹೋದೆವು. ಒಂದು ರಟ್ಟಿನ ಪೆಟ್ಟಿಗೆಯ ತುಂಬ ಚಿಂದಿ ಬಟ್ಟೆಗಳನ್ನು ಹಾಸಿ ಅದರಲ್ಲಿ ಹಕ್ಕಿ ಮರಿಯನ್ನು ಮಲಗಿಸಿದೆವು. ನಾವು ನಂತರ ಮೈ ಕೈ ಒರೆಸಿಕೊಂಡು ಬಟ್ಟೆ ಬದಲಿಸಿದೆವು. ಆಗ ನಮ್ಮ ಅಜ್ಜಿ ಟವೆಲ್ ಗಳನ್ನು ಮೀನು ಹಿಡಿಯಲು ತೆಗೆದುಕೊಂಡು ಹೋಗಬೇಡಿರೆಂದು, ಅದು ಗಬ್ಬು ವಾಸನೆ ಹಿಡಿದು ನಿರುಪಯುಕ್ತವಾಗುತ್ತದೆಂದು ಬೈಯುತ್ತಿದ್ದರು. ನಾವ್ಯಾರೂ ಅವಳ ಮಾತು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಸ್ನಾನದ ಶಾಸ್ತ್ರ ಮಾಡಿಕೊಂಡು ಬೆಟ್ಟದ ಕಡೆ ಓಡಿದೆವುಅಲ್ಲಿ ಎಷ್ಟು ಹುಡುಕಿದರೂ ಹಕ್ಕಿಯ ಗೂಡು ಕಂಡು ಬರಲ್ಲಿಲ್ಲ. ಕೊನೆಗೆ ಹಕ್ಕಿಯನ್ನು ನಾವೇ ಸಾಕೋಣ ಎಂದು ನಿರ್ಧರಿಸಿ ಮನೆಗೆ ಬಂದಾಗ ಹಕ್ಕಿ ಮರಿ ಬೆಪ್ಪಾಗಿ ಕುಳಿತ್ತಿತ್ತು. ಅದಕ್ಕೆ ಬಹುಷಃ ಆಹಾರ ಬೇಕಾಗಿರಬಹುದು ಎಂದುಕೊಂಡು ಯಾವ ಆಹಾರ ತಿನ್ನಿಸಬೇಕೆಂದು ಯೋಚಿಸಿದೆವು. ಅದು ಯಾವ ಜಾತಿ ಹಕ್ಕಿ ಎಂದು ತಿಳಿದಿರಲ್ಲಿಲ್ಲ. ಒಮ್ಮೆ ಬಾಳೆಹಣ್ಣು ತಿನ್ನಿಸಲು ಹೋಗಿ ಹಕ್ಕಿ ಉಸಿರು ಕಟ್ಟಿ ಸತ್ತಿದ್ದನ್ನು ನಾನು ತೇಜಸ್ವಿಯವರ ಪುಸ್ತಕದಲ್ಲಿ ಓದಿದ್ದೆ. ಕೊನೆಗೆ ಏನೂ ಹೊಳೆಯದೆ ಅದನ್ನು ಬಿಟ್ಟು ಬಿಡಬೇಕೆಂದು ಅಂದುಕೊಂಡೆವು. ಆದರೆ ನೆಲದ ಮೇಲೆ ಬಿಟ್ಟು ಬಂದರೆ ಯಾವುದಾದರು ನಾಯಿ, ಬೆಕ್ಕಿನ ಆಹಾರ ಆಗುವ ಸಾದ್ಯತೆ ಇತ್ತು. ಅದ್ದರಿಂದ ಶರತ್ ಒಂದು ಗೂಡು ತಂದ. ಆ ಗೂಡು ನಮಗೆ ಒಂದು ಬೇಸಿಗೆಯಲ್ಲಿ ಸಿಕ್ಕಿತ್ತು. ನೇರಳೆ ಮರಕ್ಕಾಗಿ ಅಲೆಯುತ್ತಿದ್ದಾಗ ಒಂದು ಮರದ ಮೇಲೆ ಈ ಗೂಡಿತ್ತು. ಆ ಗೂಡಿನಲ್ಲಿ ಮೂರು ಮೊಟ್ಟೆಗಳಿದ್ದವು. ಅದನ್ನು ಗೂಡಿನ ಸಮೇತ ತಂದು ನಾವೇ ಶಾಖ ಕೊಟ್ಟು ಮರಿ ಮಾಡಲು ಹೊಂಚು ಹಾಕಿದ್ದೆವು. ಅದು ಪಲಕಾರಿಯಾಗದೆ ಹಾಗೇ ಹೀಗೆ ಒಂದು ಮೊಟ್ಟೆ ಒಡೆದು ಹೋಯಿತು. ಇನ್ನೆರಡನ್ನು ನಾವೇ ಎಸೆದೆವು. ಆ ಗೂಡು ಈಗ ಹೇಗೆ ಉಪಕಾರಕ್ಕೆ ಬರುತ್ತದೆ ಎಂದು ತಿಳಿಯಲ್ಲಿಲ್ಲ. ಶರತ್ ಆ ಹಕ್ಕಿ ಮರಿಯನ್ನು ಗೂಡೊಳಗೆ ಕೂರಿಸಿ ಹಿತ್ತಲಿನ ಸಪೋಟ ಮರದ ಮೇಲೆ ಇಡಬೇಕೆಂದು ಅದು ತಾನಾಗಿ ಹಾರಿ ಹೋಗುತ್ತದೆ ಎಂದು ಹೇಳಿದ. ನನಗೂ ಸರಿ ಎನ್ನಿಸಿತು. ಕೊನೆಗೆ ಹಾಗೇ ಮಾಡಿದೆವು. ಆದರೆ ಮಧ್ಯಾಹ್ನ ವಾದರೂ ಅದು ಹಾರಿ ಹೋಗದ್ದನ್ನು ಕಂಡು ನನಗೆ ಗಾಭರಿಯಾಯಿತು. ನಮ್ಮ ಅಜ್ಜ ಅದು ಆಹಾರವಿಲ್ಲದೆ ಸಾಯುತ್ತದೆಂದು ಆದ್ದರಿಂದ ಎರೆ ಹುಳುವನ್ನಾದರೂ ಕೊಡಿ ತಿನ್ನುತ್ತದೇನೋ ಎಂದರು. ನಾನು ತಕ್ಷಣ ತೋಟಕ್ಕೆ ಓಡಿದೆ. ಅಲ್ಲಿ ಒಂದು ಟ್ಯಾಂಕಿನಲ್ಲಿ ಅಜ್ಜ ಗೊಬ್ಬರಕ್ಕಾಗಿ ಎರೆ ಹುಳು ಸಾಕಿದ್ದರು. ಒಂದೆರಡು ಎರೆ ಹುಳುವನ್ನೇನೋ ತಂದೆ ಆದರೆ ಅದನ್ನು ಹಕ್ಕಿ ಮರಿ ಹೇಗೆ ತಿನ್ನುತ್ತದೆ ಎಂದು ತಿಳಿಯಲ್ಲಿಲ್ಲ. ಆಗ ಅರುಣನ ಹತ್ತಿರ ಚಿಮುಟಿಗೆ ಇರುವುದು ಗಮನಕ್ಕೆ ಬಂತು. ತಕ್ಷಣ ಆತನನ್ನು ಓಡಿಸಿದೆ. ಆತ ತಂದ ಮೇಲೆ ಎರೆ ಹುಳುವನ್ನ ತಿನ್ನಿಸಿದೆ. ಕೊನೆಗೆ ಹಕ್ಕಿ ಮರಿಯನ್ನು ಹಾಗೇ ಮರದ ಮೇಲೆ ಬಿಟ್ಟು ಬಂದೆವು.

ಸಂಜೆ ನಾವು ಕ್ರಿಕೆಟ್ ಆಡಲು ಹೊರಟುಹೋದೆವು. ಆಗ ನಮ್ಮ ಅಜ್ಜ ಪಂಪ್ ಸೆಟ್ ಆನ್ ಮಾಡಲು ಹಿತ್ತಲಿಗೆ ಹೋಗಿದ್ದರಂತೆ. ತಾಯಿ ಹಕ್ಕಿ ಬಂದು ಕೂಗುತ್ತಿತ್ತಂತೆ. ಇದೂ ಕೂಗುತ್ತಿತ್ತಂತೆ. ನಾವು ಬಂದ ಮೇಲೆ ಅಜ್ಜ ಇವಿಷ್ಟನ್ನು ಹೇಳಿದರು. ತಕ್ಷಣ ನಾವು ಹಿತ್ತಿಲಿಗೆ ಹೋದೆವು. ಅಲ್ಲಿ ನೋಡಿದರೆ ಹಕ್ಕಿ ಮರಿ ಇರಲ್ಲಿಲ್ಲ. ನಮಗೆ ತುಂಬ ಬೇಜಾರಾಯಿತು. ಆದರೆ ಹಕ್ಕಿ ಸಾಕುವ ಕಷ್ಟವೂ ಅರಿವಿಗೆ ಬಂತು.

ಮುಂದಿನ ಭಾಗದಲ್ಲಿ - ನಮ್ಮ ನಿರ್ಧಾರ.
********************************************************************************
ವ್ಯಾಕರಣದಲ್ಲಿನ ದೋಷಕ್ಕಾಗಿ ಕ್ಷಮೆ ಇರಲಿ.

No comments:

Post a Comment